ಸ್ಟೋಕ್ಸ್ ಸರ್ವಶ್ರೇಷ್ಟ ಎಂದು ಬಣ್ಣಿಸಿದ ಐಸಿಸಿಗೆ ಸಚಿನ್ ಅಭಿಮಾನಿಗಳ ತರಾಟೆ
ಮುಂಬೈ, ಆ.28: ಬೆನ್ ಸ್ಟೋಕ್ಸ್ ವೀರೋಚಿತ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಹೆಡ್ಡಿಂಗ್ಲೆಯಲ್ಲಿ ಇತ್ತೀಚೆಗೆ ಆಸ್ಟ್ರೇಲಿಯವ ವಿರುದ್ಧ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಅಸಾಮಾನ್ಯ ಗೆಲುವು ದಾಖಲಿಸಿತ್ತು. ಇದನ್ನು ಉಲ್ಲೇಖಿಸಿ ಆಲ್‌ರೌಂಡರ್ ಸ್ಟೋಕ್ಸ್ ಸರ್ವಶ್ರೇಷ್ಠ ಆಟಗಾರ ಎಂದು ಬಣ್ಣಿಸಿರುವ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಐಸಿಸಿಯ ಈ ವರ್ತನೆಯು ಸಚಿನ್ ತೆಂಡುಲ್ಕರ್ ಅಭಿಮಾನಿಗಳನ್ನು ಕೆರಳಿಸಿದೆ.
ತನ್ನ ಅಧಿಕೃತ ಟ್ವಿಟರ್‌ನಲ್ಲಿ ಸ್ಟೋಕ್ಸ್ ಅವರು ತೆಂಡುಲ್ಕರ್ ಅವರೊಂದಿಗಿದ್ದ ಚಿತ್ರವನ್ನು ಪ್ರಕಟಿಸಿದ್ದ ಐಸಿಸಿ, ಚಿತ್ರದ ಕೆಳಗೆ ‘‘ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಹಾಗೂ ಸಚಿನ್ ತೆಂಡುಲ್ಕರ್’’ ಎಂದು ಬರೆದಿತ್ತು.
ಡುಹ್ರಾಮ್ ಕ್ರಿಕೆಟಿಗ ಸ್ಟೋಕ್ಸ್ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಔಟಾಗದೆ 84 ರನ್ ಗಳಿಸಿ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಜಯಿಸಲು ನೆರವಾಗಿದ್ದರು.
ತೆಂಡುಲ್ಕರ್‌ಗಿಂತ ಸ್ಟೋಕ್ಸ್ ಶ್ರೇಷ್ಠ ಎಂಬರ್ಥದಲ್ಲಿ ಬರೆದಿರುವ ಐಸಿಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ಒಬ್ಬರು ಏಕದಿನ ಕ್ರಿಕೆಟ್‌ನಲ್ಲಿ 15,921 ರನ್, ಟೆಸ್ಟ್‌ನಲ್ಲಿ 18,426 ರನ್ ಗಳಿಸಿದ್ದಾರೆ. ಮತ್ತೊಬ್ಬರು ಟೆಸ್ಟ್‌ನಲ್ಲಿ 3,479 ರನ್ ಹಾಗೂ ಏಕದಿನದಲ್ಲಿ 2,628 ರನ್ ಗಳಿಸಿದ್ದಾರೆ. ಸ್ಟೋಕ್ಸ್ ಒಂದು ದಿನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನಾಗಬಹುದು. ಆದರೆ, ‘ಕ್ರಿಕೆಟ್‌ನ ಗಾಡ್’ಆಗಲು ಸಾಧ್ಯವಿಲ್ಲ ಎಂದು ಓರ್ವ ಅಭಿಮಾನಿ ಟ್ವೀಟ್ ಮಾಡಿದ್ದಾನೆ.
ನಿಜವಾಗಿಯೂ ಸರ್ವಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡುಲ್ಕರ್. ಅವರ ಬಳಿಕ ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲವೂ ಆರಂಭವಾದವು ಎಂದು ಇನ್ನೋರ್ವ ಅಭಿಮಾನಿ ಟ್ವೀಟ್ ಮಾಡಿದ್ದಾನೆ. ಬಿಸಿಸಿಐ ದಯವಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಕೆಟ್ಟ ಟ್ವೀಟ್ ಮಾಡಿರುವ ಐಸಿಸಿಯನ್ನು ಅಮಾನತುಗೊಳಿಸಬೇಕು ಎಂದು ಇನ್ನೊಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ಲೀಡ್ಸ್‌ನಲ್ಲಿ ಇತ್ತೀಚೆಗೆ ನಡೆದ ಆಸೀಸ್ ವಿರುದ್ಧ ಆ್ಯಶಸ್ ಟೆಸ್ಟ್‌ನ 3ನೇ ಪಂದ್ಯದಲ್ಲಿ ಔಟಾಗದೆ 135 ರನ್ ಗಳಿಸಿದ್ದ ಸ್ಟೋಕ್ಸ್ ಆಸ್ಟ್ರೇಲಿಯ ಕೈಯಿಂದ ಗೆಲುವು ಕಸಿಯಲು ನೆರವಾಗಿದ್ದರು. ಗೆಲ್ಲಲು 359 ರನ್ ಚೇಸಿಂಗ್ ಮಾಡಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ 286 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ಇಂಗ್ಲೆಂಡ್ ಗೆಲುವಿಗೆ 73 ರನ್ ಅಗತ್ಯವಿತ್ತು. 11ನೇ ಕ್ರಮಾಂಕದ ದಾಂಡಿಗ ಜಾಕ್ ಲೀಚ್‌ರೊಂದಿಗೆ ಕೈಜೋಡಿಸಿದ ಸ್ಟೋಕ್ಸ್ ಮೈದಾನದ ಎಲ್ಲ ಮೂಲೆಮೂಲೆಗೂ ಚೆಂಡನ್ನು ಅಟ್ಟಿ ಆತಿಥೇಯ ಇಂಗ್ಲೆಂಡ್‌ಗೆ 1 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟಿದ್ದರು.