×
Ad

ಶ್ರೀಲಂಕಾದ ಖ್ಯಾತ ಸ್ಪಿನ್ನರ್ ಅಜಂತ ಮೆಂಡಿಸ್ ನಿವೃತ್ತಿ

Update: 2019-08-28 23:38 IST

ಕೊಲಂಬೊ, ಆ.28: ಈ ಹಿಂದೆ ಕೇರಂ ಬಾಲ್ ಎಸೆತದ ಮೂಲಕ ಇಡೀ ವಿಶ್ವವನ್ನು ತನ್ನತ್ತ ಸೆಳೆದಿದ್ದ, ಶ್ರೀಲಂಕಾದ ವಿಲಕ್ಷಣ ಸ್ಪಿನ್ ಬೌಲರ್ ಅಜಂತ ಮೆಂಡಿಸ್ ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

2015ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಶ್ರೀಲಂಕಾದ ಪರ ಕೊನೆಯ ಪಂದ್ಯ ಆಡಿದ್ದ 34ರ ಹರೆಯದ ಮೆಂಡಿಸ್‌ಗೆ ಆ ಬಳಿಕ ರಾಷ್ಟ್ರೀಯ ತಂಡಕ್ಕೆ ವಾಪಸಾಗಲು ಸಾಧ್ಯವಾಗಲಿಲ್ಲ. 2008ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ ್ಟ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದ ಮೆಂಡಿಸ್ ಅದೇ ವರ್ಷ ನಡೆದಿದ್ದ ಏಶ್ಯಕಪ್ ಫೈನಲ್‌ನಲ್ಲಿ ಭಾರತ ವಿರುದ್ಧ 13 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಉರುಳಿಸಿ ಪ್ರಸಿದ್ದಿಗೆ ಬಂದಿದ್ದರು. ಭಾರತದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಅವರನ್ನು ಪೆವಿಲಿಯನ್‌ಗೆ ಅಟ್ಟಿ ಗಮನ ಸೆಳೆದಿದ್ದರು.

ಭಾರತ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಮೆಂಡಿಸ್ ಆ ಸರಣಿಯಲ್ಲಿ ಆಡಿದ್ದ 3 ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಉರುಳಿಸಿದ್ದರು. ವಿಶ್ವ ಕ್ರಿಕೆಟ್‌ಗೆ ಕೇರಂ ಬಾಲ್ ಎಸೆತವನ್ನು ಪರಿಚಯಿಸಿದ್ದ ಅಜಂತ ಮೆಂಡಿಸ್ ಓರ್ವ ಅಪೂರ್ವ ಕ್ರಿಕೆಟಿಗನಾಗಿದ್ದರು.

ಏಕದಿನ ಕ್ರಿಕೆಟ್ ಚರಿತ್ರೆಯಲ್ಲಿ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದ್ದ ಮೆಂಡಿಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡು ಬಾರಿ 6 ವಿಕೆಟ್ ಗೊಂಚಲು ಪಡೆದಿರುವ ಏಕೈಕ ಬೌಲರ್.

ವೃತ್ತಿಜೀವನದ ಆರಂಭದಲ್ಲಿ ಅತ್ಯಂತ ಅಪಾಯಕಾರಿ ಅಂತರ್‌ರಾಷ್ಟ್ರೀಯ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಮೆಂಡಿಸ್ 2009 ಹಾಗೂ 2012ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಲಂಕಾದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದರು. ಎಲ್ಲ ತಂಡಗಳ ಆಟಗಾರರು ಮೆಂಡಿಸ್ ಬೌಲಿಂಗ್ ಮರ್ಮವನ್ನು ಅರಿತು ಚೆನ್ನಾಗಿ ಆಡಲಾರಂಭಿಸಿದ ಬಳಿಕ ಅವರ ವೃತ್ತಿಜೀವನದ ಯಶಸ್ಸು ಇಳಿಮುಖವಾಗಿತ್ತು. 2011ರ ವಿಶ್ವಕಪ್‌ನಲ್ಲಿ ಲಂಕಾ ತಂಡಕ್ಕೆ ವಾಪಸಾಗಿದ್ದ ಅವರು ತನ್ನ ತಂಡವನ್ನು ಫೈನಲ್ ತನಕ ತಲುಪಿಸಿದ್ದರು.

ಮೆಂಡಿಸ್ ಶ್ರೀಲಂಕಾದ ಪರ 19 ಟೆಸ್ಟ್, 87 ಏಕದಿನ ಹಾಗೂ 39 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 70 ಟೆಸ್ಟ್ ವಿಕೆಟ್‌ಗಳು, 152 ಏಕದಿನ ಹಾಗೂ 66 ಟಿ-20 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

 ಈ ವರ್ಷ ಶ್ರೀಲಂಕಾದ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದ ಮೆಂಡಿಸ್ ಪ್ರೀಮಿಯರ್ ಲೀಗ್‌ವೊಂದರಲ್ಲಿ ಪೊಲೀಸ್ ಸ್ಪೋರ್ಟ್ಸ್ ಕ್ಲಬ್‌ನ ನಾಯಕತ್ವವಹಿಸಿಕೊಂಡಿದ್ದರು. ಕೆಲವೇ ಓವರ್‌ಗಳ ಬೌಲಿಂಗ್ ಮಾಡಿದ್ದ ಅವರು ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News