×
Ad

ಧೋನಿಗೆ ಅವಕಾಶ ಸಿಗುವ ಸಾಧ್ಯತೆ ಕ್ಷೀಣ

Update: 2019-08-28 23:42 IST

ಹೊಸದಿಲ್ಲಿ, ಆ.28: ಮಹೇಂದ್ರ ಸಿಂಗ್ ಧೋನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿದ್ದಾರೆ. ಆದರೆ, ಅವರು ಸೆಪ್ಟಂಬರ್ 15ರಿಂದ ಸ್ವದೇಶದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇದೆ.

ದ.ಆಫ್ರಿಕ ವಿರುದ್ಧ ಸರಣಿಗೆ ಸೆ.4ರಂದು ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಸೆ.15ರಂದು ಧರ್ಮಶಾಲಾದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಮೊಹಾಲಿ(ಸೆ.18) ಹಾಗೂ ಬೆಂಗಳೂರಿನಲ್ಲಿ(ಸೆ.22)ಇನ್ನೆರಡು ಪಂದ್ಯಗಳು ನಡೆಯಲಿವೆ.

ವೆಸ್ಟ್‌ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದ ಟ್ವೆಂಟಿ-20 ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿರುವ ತಂಡವನ್ನೇ ಭಾರತ ಆಯ್ಕೆ ಮಾಡುವ ಎಲ್ಲ ಸಾಧ್ಯತೆಯಿದೆ. ಆದರೆ, ಇಲ್ಲಿ ಆಟಗಾರರ ಫಿಟ್ನೆಸ್ ಪ್ರಮುಖ ವಿಚಾರವಾಗಲಿದೆ. ಆಯ್ಕೆ ಸಮಿತಿ 2020ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದ ಆತಿಥ್ಯದಲ್ಲಿ ನಡೆಯುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತಂಡವನ್ನು ಕಟ್ಟುವ ಕೆಲಸದಲ್ಲಿ ನಿರತವಾಗಿದೆ.

‘‘ಭಾರತ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಆಡುವ ಮೊದಲು ಕೇವಲ 22 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಸೀಮಿತ ಓವರ್ ಪಂದ್ಯಗಳಲ್ಲಿ ಅದರಲ್ಲೂ ಮುಖ್ಯವಾಗಿ ಟ್ವೆಂಟಿ-20ಯಲ್ಲಿ ಮೂರು ಕೀಪರ್‌ಗಳನ್ನು ಆಯ್ಕೆ ಮಾಡುವತ್ತ ಆಯ್ಕೆ ಸಮಿತಿ ಚಿತ್ತವಿರಿಸಿದೆ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಮೊದಲು ಧೋನಿಯ ಬಳಿ ಬಿಸಿಸಿಐ ಅಧಿಕಾರಿಗಳು ಅಥವಾ ಆಯ್ಕೆ ಸಮಿತಿಯು ಮಾತನಾಡಿರುವ ಕುರಿತು ಯಾವುದೇ ಸ್ಪಷ್ಟತೆಯಿಲ್ಲ. ತಾನು ವಿರಾಮ ಪಡೆದು ಪ್ರಾಂತೀಯ ಸೇನೆಯಲ್ಲಿ ತನ್ನ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುವು ದಾಗಿ ಧೋನಿ ಬಿಸಿಸಿಐಗೆ ಮಾಹಿತಿ ನೀಡಿದ್ದರು.

 ಆಯ್ಕೆ ಸಮಿತಿಯು ಸಂಜು ಸ್ಯಾಮ್ಸನ್ ಹಾಗೂ ಭಾರತ ‘ಎ’ ತಂಡದ ಇಶಾನ್ ಕಿಶನ್‌ರನ್ನು ಎರಡನೇ ಹಾಗೂ ಮೂರನೇ ವಿಕೆಟ್‌ಕೀಪರ್ ಆಗಿ ಪರಿಗಣಿಸುವ ಸಾಧ್ಯತೆಯಿದೆ. ರಿಷಭ್ ಪಂತ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿದ್ದಾರೆ. ಆಯ್ಕೆ ಸಮಿತಿಯ ಕೆಲವು ಸದಸ್ಯರು ‘ಎ’ ಸರಣಿಯಲ್ಲಿ ಸ್ಯಾಮ್ಸನ್ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲು ತಿರುವನಂತಪುರದಲ್ಲಿದ್ದಾರೆ. ಕಳೆದ ಎರಡು ಲಿಸ್ಟ್ ‘ಎ’ ಪಂದ್ಯಗಳಲ್ಲಿ ಸ್ಯಾಮ್ಸನ್ ಆಡಿದ್ದಾರೆ.

ಪಂತ್ ಕಳೆದ ಟಿ-20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಇಶಾನ್ ಕಿಶನ್ ಎ ತಂಡದಲ್ಲಿದ್ದಾರೆ. ಆಸ್ಟ್ರೇಲಿಯದ ದೊಡ್ಡ ಮೈದಾನದಲ್ಲಿ ಭರ್ಜರಿ ಹಿಟ್ಟರ್‌ಗಳ ಅಗತ್ಯ ನಮಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News