ಫೆಡರರ್ ಮೂರನೇ ಸುತ್ತಿಗೆ ಪ್ರವೇಶ

Update: 2019-08-29 17:24 GMT

ನ್ಯೂಯಾರ್ಕ್, ಆ.29: ಇಪ್ಪತ್ತು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರೋಜರ್ ಫೆಡರರ್ ಯು.ಎಸ್. ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ತಲುಪಿದರು.

 ಇಲ್ಲಿ ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಫೆಡರರ್ 99ನೇ ರ್ಯಾಂಕಿನ ಬೋಸ್ನಿಯದ ಡಮಿರ್ ಝುಂಹರ್‌ರನ್ನು 3-6, 6-2, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಸ್ವಿಸ್‌ನ ಮೂರನೇ ಶ್ರೇಯಾಂಕದ ಆಟಗಾರ ಫೆಡರರ್ ಭಾರತದ ಕ್ವಾಲಿಫೈಯರ್ ಸುಮಿತ್ ನಗಾಲ್ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಮೊದಲ ಸೆಟನ್ನು ಸೋತಿದ್ದರು. ಬೋಸ್ನಿಯ ಆಟಗಾರನ ವಿರುದ್ಧವೂ ಮೊದಲ ಸೆಟನ್ನು 3-6ರಿಂದ ಕಳೆದುಕೊಂಡಿದ್ದ ಫೆಡರರ್ ಆ ಬಳಿಕ ಎಚ್ಚರಿಕೆಯ ಆಟ ಆಡಿದರು.

ಕಳೆದ ತಿಂಗಳು ನಡೆದ ವಿಂಬಲ್ಡನ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅಗ್ರ ರ್ಯಾಂಕಿನ ನೊವಾಕ್ ಜೊಕೊವಿಕ್ ವಿರುದ್ಧ ಐದು ಸೆಟ್‌ಗಳ ಹೋರಾಟದಲ್ಲಿ ಸೋತಿದ್ದ ಐದು ಬಾರಿಯ ಯುಎಸ್ ಓಪನ್ ಚಾಂಪಿಯನ್ ಫೆಡರರ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಲುಕಾಸ್ ಪೌಲ್ಲಿ ಅಥವಾ ಬ್ರಿಟನ್‌ನ ಡ್ಯಾನ್ ಎವನ್ಸ್‌ರನ್ನು ಎದುರಿಸಲಿದ್ದಾರೆ. ಜಪಾನ್‌ನ 7ನೇ ಶ್ರೇಯಾಂಕದ ಕೀ ನಿಶಿಕೊರಿ 2014ರ ಯುಎಸ್ ಓಪನ್ ರನ್ನರ್ಸ್ ಅಪ್ ಅಮೆರಿಕದ ಬ್ರಾಡ್ಲಿ ಕ್ಲಾನ್‌ರನ್ನು 6-2, 4-6, 6-3, 7-5 ಸೆಟ್‌ಗಳಿಂದ ಮಣಿಸಿದ್ದಾರೆ. ನಿಶಿಕೊರಿ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ಅಲೆಕ್ಸ್ ಅಥವಾ ಚಿಲಿಯದ ಕ್ರಿಸ್ಟಿಯನ್ ಗಾರಿನ್‌ರನ್ನು ಎದುರಿಸಲಿದ್ದಾರೆ.

ವೀನಸ್ ವಿಲಿಯಮ್ಸ್ ಗೆ ಸೋಲುಣಿಸಿದ ಎಲಿನಾ ಸ್ವಿಟೋಲಿನಾ

ಐದನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಅಮೆರಿಕದ ವೀನಸ್ ವಿಲಿಯಮ್ಸ್ ರನ್ನು ಯು.ಎಸ್. ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲಿಸಿ ಟೂರ್ನಿಯಿಂದ ಹೊರ ಹಾಕಿದರು. 39ರ ಹರೆಯದ ಮಾಜಿ ಚಾಂಪಿಯನ್ ವೀನಸ್ ವೀರೋಚಿತ ಹೋರಾಟ ನೀಡಿದ್ದರೂ ಸ್ವಿಟೋಲಿನಾ 6-4,6-4 ನೇರ ಸೆಟ್‌ಗಳಿಂದ ಜಯ ಸಾಧಿಸಿ ಮೂರನೇ ಸುತ್ತು ತಲುಪಿದರು.

24 ರ ಹರೆಯದ ಉಕ್ರೇನ್ ಆಟಗಾರ್ತಿ ಕಳೆದ ಎರಡು ವರ್ಷಗಳಿಂದ ಎರಡು ಬಾರಿ ಯುಎಸ್ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದರು. ಮೊದಲ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಝೆಕ್‌ನ 3ನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಜಾರ್ಜಿಯಾದ 202ನೇ ರ್ಯಾಂಕಿನ ಮರಿಯಮ್ ಬೊಲ್ಕಾವಾಝ್‌ರನ್ನು 6-1, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. 2016ರ ಯು.ಎಸ್.ಓಪನ್ ರನ್ನರ್ಸ್‌ಅಪ್ ಪ್ಲಿಸ್ಕೋವಾ ಮುಂದಿನ ಸುತ್ತಿನಲ್ಲಿ ಟ್ಯುನಿಶಿಯದ ಒನ್ಸ್ ಜಾಬೆವುರ್ ಅಥವಾ ಬೆಲಾರಸ್‌ನ ಅಲಿಯಾಸಾಂಡ್ರಾರನ್ನು ಮುಖಾಮುಖಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News