ಕುಂಬ್ಳೆ ವಿಶ್ವದಾಖಲೆಗೆ ಶ್ರೀನಾಥ್ ವೈಡ್ ನೆರವಾಗಿದ್ದು ಹೇಗೆ ಗೊತ್ತಾ?
ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ತೊಂಬತ್ತರ ದಶಕದಿಂದ ಆರಂಭಗೊಂಡು ಒಂದು ದಶಕಕ್ಕೂ ಅಧಿಕ ಕಾಲ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದವರು ಭಾರತ ಕಂಡ ಅತ್ಯಂತ ವೇಗದ ಬೌಲರ್‍ಗಳಲ್ಲಿ ಒಬ್ಬರಾಗಿದ್ದ ಜಾವಗಲ್ ಶ್ರೀನಾಥ್. ಆಗಸ್ಟ್ 31. 1969ರಂದು ಜನಿಸಿದ್ದ ಜಾವಗಲ್ ಶ್ರೀನಾಥ್ ಅವರ 50ನೇ ಹುಟ್ಟುಹಬ್ಬದಂದು ಅವರ ಕುರಿತಾದ ಸ್ವಾರಸ್ಯಕರ ಮಾಹಿತಿಗಳು ಇಲ್ಲಿವೆ.
► ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ
ಹೈದರಾಬಾದ್ ತಂಡದೆದುರು 1989ರಲ್ಲಿ ರಣಜಿ ಪಂದ್ಯದ ಮೂಲಕ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ ಶ್ರೀನಾಥ್ ತಮ್ಮ ಮೊದಲನೇ ಪಂದ್ಯದ ಮೊದಲನೇ ಇನ್ನಿಂಗ್ಸ್‍ನಲ್ಲಿಯೇ ಹ್ಯಾಟ್ರಿಕ್ ಸಾಧಿಸಿದ್ದರಲ್ಲದೆ 85 ರನ್ ಗಳಿಗೆ ಐದು ವಿಕೆಟ್ ಕಿತ್ತಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಇನ್ನೆರಡು ವಿಕೆಟ್ ಕಿತ್ತು ತಮ್ಮ ಮೊದಲ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ ಬಾಚಿಕೊಂಡರು.
► ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ನಿರ್ವಹಣೆ
ಶ್ರೀನಾಥ್ ಅವರು ಪಾಕಿಸ್ತಾನದೆದುರಿನ ಪಂದ್ಯದಲ್ಲಿ 86 ರನ್ ಗಳಿಗೆ ಎಂಟು ವಿಕೆಟ್ ಕಿತ್ತಿದ್ದರೂ ಅವರು ಅತ್ಯುತ್ತಮ ನಿರ್ವಹಣೆ 1996-978ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತೋರಿದ್ದರು. ಆ ಪಂದ್ಯದಲ್ಲಿ ಅವರು 21 ರನ್ ಗಳಿಗೆ ಆರು ವಿಕೆಟ್ ಕಿತ್ತಿದ್ದರು. ಅವರ ಈ ಸಾಧನೆಯಿಂದಾಗಿ 170 ರನ್ ಬೆಂಬತ್ತಿದ್ದ ದಕ್ಷಿಣ ಆಫ್ರಿಕಾ 105 ರನ್ ಗಳಿಗೆ ಆಲ್ ಔಟ್ ಆಗಿತ್ತು.
► ವೈಡ್ ಬೌಲಿಂಗ್
1999ರಲ್ಲಿ ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 74 ರನ್‍ಗಳಿಗೆ ಎಲ್ಲಾ ವಿಕೆಟ್ ಕಿತ್ತ ಅನಿಲ್ ಕುಂಬ್ಳೆ ಅವರ ಅಪೂರ್ವ ಸಾಧನೆ ಶ್ರೀನಾಥ್ ಅವರ ಸಹಕಾರವಿಲ್ಲದೆ ಇದ್ದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಕುಂಬ್ಳೆ ಅವರಿಗೆ ಎಲ್ಲಾ 10 ವಿಕೆಟ್ ಪಡೆಯುವ ಸಾಧ್ಯತೆಯಿದೆಯೆನ್ನುವಾಗ ಶ್ರೀನಾಥ್ ಅವರು ತಮ್ಮ ಪಾಲಿಗೆ ವಿಕೆಟ್ ದೊರಕುವುದನ್ನು ತಡೆಯಲು ವೈಡ್ ಬಾಲ್ ಎಸೆಯಲು ಆರಂಭಿಸಿದ್ದರು. ಅಂತಿಮವಾಗಿ ಕುಂಬ್ಳೆ ಎಲ್ಲಾ ಹತ್ತು ವಿಕೆಟ್‍ಗಳನ್ನು ತಮ್ಮದಾಗಿಸಿಕೊಂಡಿದ್ದರು.
► ವೈವಾಹಿಕ ಜೀವನ
ಶ್ರೀನಾಥ್ ಅವರ ಮೊದಲ ವಿವಾಹ ಪರಸ್ಪರ ಸಹಮತದೊಂದಿಗೆ ವಿಚ್ಛೇದನದಲ್ಲಿ ಅಂತ್ಯಗೊಂಡ ನಂತರ 2007ರಲ್ಲಿ ಅವರು ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾದರು.
► ಇಂಡಿಯನ್ ಕ್ರಿಕೆಟರ್ ಆಫ್ ದಿ ಇಯರ್
ಶ್ರೀನಾಥ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ರಂಗಕ್ಕೆ 1991ರಲ್ಲಿ ಪಾದಾರ್ಪಣೆ ಮಾಡಿದ್ದರೆ, ಮುಂದಿನ ವರ್ಷವೇ ಅವರು ಇಂಡಿಯನ್ ಕ್ರಿಕೆಟರ್ ಆಫ್ ದಿ ಇಯರ್ ಎಂದು ಪರಿಗಣಿತರಾಗಿದ್ದರು.
► ಅರ್ಜುನ ಪ್ರಶಸ್ತಿ
ಭಾರತೀಯ ಕ್ರೀಡಾಳುಗಳಿಗೆ ನೀಡಲಾಗುವ ಅತ್ಯುನ್ನತ ಗೌರವ-ಅರ್ಜುನ ಪ್ರಶಸ್ತಿಯನ್ನು ಶ್ರೀನಾಥ್ ಅವರಿಗೆ 1996ರಲ್ಲಿ ಪ್ರದಾನ ಮಾಡಲಾಗಿತ್ತು.
► ಮ್ಯಾಚ್ ರೆಫರಿ
ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ನಂತರ 2006ರಲ್ಲಿ ಅವರು ಮ್ಯಾಚ್ ರೆಫರಿ ಪಾತ್ರ ನಿರ್ವಹಿಸಲು ಆರಂಭಿಸಿದ್ದರು.