×
Ad

ಜೊಕೊವಿಕ್, ಫೆಡರರ್, ವಾವ್ರಿಂಕ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2019-08-31 23:56 IST

ನ್ಯೂಯಾರ್ಕ್, ಆ.31: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್, ಸ್ವಿಸ್ ಆಟಗಾರರಾದ ರೋಜರ್ ಫೆಡರರ್ ಹಾಗೂ ಸ್ಟಾನ್ ವಾವ್ರಿಂಕ ಅಮೆರಿಕನ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ-16ರ ಸುತ್ತಿಗೆ ತಲುಪಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಡೆನಿಸ್ ಕುಡ್ಲಾರನ್ನು 6-3, 6-4, 6-2 ನೇರ ಸೆಟ್‌ಗಳಿಂದ ಮಣಿಸಿದ ಸರ್ಬಿಯ ಆಟಗಾರ ಜೊಕೊವಿಕ್ ಅಂತಿಮ-16ರ ಸುತ್ತು ತಲುಪಿದರು. ಎರಡನೇ ಸುತ್ತಿನ ಪಂದ್ಯದ ವೇಳೆ ಕಾಣಿಸಿಕೊಂಡ ಎಡ ಭುಜನೋವಿನ ಕುರಿತ ಆತಂಕಕ್ಕೆ ತೆರೆ ಎಳೆದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಭುಜನೋವು ಕಾಣಿಸಿಕೊಂಡಾಗ ಜೊಕೊವಿಕ್ ಪದೇ ಪದೇ ಚಿಕಿತ್ಸೆ ಪಡೆದಿದ್ದರು. ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಅವರ ಗುರಿ ಡೋಲಾಯಮಾನವಾಗಿತ್ತು. ಕುಡ್ಲಾ ವಿರುದ್ಧ ಪಂದ್ಯದಲ್ಲಿ ನೋವನ್ನು ತೋರಿಸಿಕೊಳ್ಳದೇ ಆಡಿದ 16 ಬಾರಿಯ ಚಾಂಪಿಯನ್ ಜೊಕೊವಿಕ್ ಮೂರು ಸೆಟ್‌ಗಳನ್ನು ಸುಲಭವಾಗಿ ಜಯಿಸಿದರು.

ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಮಾಜಿ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ. ವಾವ್ರಿಂಕ ವಿರುದ್ಧ ಆಡಿರುವ 24 ಪಂದ್ಯಗಳ ಪೈಕಿ 19ರಲ್ಲಿ ಜಯ ಸಾಧಿಸಿ ಉತ್ತಮ ದಾಖಲೆ ಹೊಂದಿದ್ದಾರೆ.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ವಾವ್ರಿಂಕ ಅವರು ಇಟಲಿಯ ಪಾಲೊ ಲೊರೆಂಝಿ ಅವರನ್ನು 6-4, 7-6(9), 7-6(4) ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಯುಎಸ್ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದರು.

ಸುಮಾರು ಮೂರು ಗಂಟೆಗಳ ತನಕ ನಡೆದ ಹಣಾಹಣಿಯಲ್ಲಿ ಜಯಭೇರಿ ಬಾರಿಸಿದ ವಾವ್ರಿಂಕಾ 2016ರ ಬಳಿಕ ಮೊದಲ ಬಾರಿ ಯುಎಸ್ ಓಪನ್‌ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದಾರೆ.

 ಪ್ರಿ-ಕ್ವಾರ್ಟರ್ ಫೈನಲ್‌ಗೆ ಫೆಡರರ್:

ಯುಎಸ್ ಓಪನ್‌ನ ಮೊದಲ ಎರಡು ಪಂದ್ಯಗಳಲ್ಲಿ ಮೊದಲ ಸೆಟನ್ನು ಕಳೆದುಕೊಂಡು ನಿಧಾನಗತಿಯ ಆರಂಭ ಪಡೆದಿದ್ದ ಹಿರಿಯ ಆಟಗಾರ ರೋಜರ್ ಫೆಡರರ್ 3ನೇ ಪಂದ್ಯದಲ್ಲಿ ಬ್ರಿಟನ್‌ನ ಡೇನಿಯಲ್ ಎವನ್ಸ್‌ರನ್ನು 6-2, 6-2, 6-1 ಸೆಟ್‌ಗಳ ಅಂತರದಿಂದ ಸೋಲಿಸಿ ಅಂತಿಮ-16ರ ಸುತ್ತು ಪ್ರವೇಶಿಸಿದರು.

ಯುಎಸ್ ಓಪನ್‌ನಲ್ಲಿ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮೂರನೇ ಶ್ರೇಯಾಂಕದ ಫೆಡರರ್ ಮುಂದಿನ ಸುತ್ತಿನಲ್ಲಿ ಪಾಬ್ಲೊ ಕರೆನೊ ಬುಸ್ಟಾ ಅಥವಾ ಡೇವಿಡ್ ಗಫಿನ್‌ರನ್ನು ಮುಖಾಮುಖಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News