ಕ್ರಿಕೆಟ್: ಸರಣಿ ಕ್ಲೀನ್ ಸ್ವೀಪ್‌ನತ್ತ ಭಾರತ

Update: 2019-09-02 04:00 GMT

ಕಿಂಗ್‌ಸ್ಟನ್ (ಜಮೈಕಾ): ಹನುಮ ವಿಹಾರಿ ಹಾಗೂ ಅಜಿಂಕ್ಯಾ ರಹಾನೆ ಮುರಿಯದ ಐದನೇ ವಿಕೆಟ್‌ಗೆ 111 ರನ್ ಕಲೆ ಹಾಕುವ ಮೂಲಕ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಜಯದ ಅಂಚಿಗೆ ತಂದು ನಿಲ್ಲಿಸಿದ್ದಾರೆ.

ಪಂದ್ಯದ ಮೂರನೇ ದಿನವಾದ ರವಿವಾರ ಅತಿಥೇಯ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 468 ರನ್‌ಗಳ ದೊಡ್ಡ ಗುರಿಯನ್ನು ಭಾರತ ನೀಡಿದೆ. ಭಾರತದ ಅಗ್ರಕ್ರಮಾಂಕದ ನಾಲ್ವರು ಆಟಗಾರರು ಕೇವಲ 57 ರನ್‌ಗಳಿಗೆ ಔಟ್ ಆದ ಹಂತದಲ್ಲಿ ಜತೆ ಸೇರಿದ ರಹಾನೆ (ನಾಟೌಟ್ 64) ಮತ್ತು ವಿಹಾರಿ (ನಾಟೌಟ್ 53), ಭಾರತದ ಎರಡನೇ ಇನಿಂಗ್ಸ್ ಲಯ ಕಂಡುಕೊಳ್ಳಲು ಕಾರಣರಾದರು.

ಈ ಭರ್ಜರಿ ಜತೆಯಾಟದ ನೆರವಿನಿಂದಾಗಿ ಭಾರತ ದ್ವಿತೀಯ ಇನಿಂಗ್ಸನ್ನು 4 ವಿಕೆಟ್ ನಷ್ಟಕ್ಕೆ 168 ರನ್‌ಗಳಾಗಿದ್ದಾಗ ಡಿಕ್ಲೇರ್ ಮಾಡಿಕೊಳ್ಳಲಾಯಿತು. ಬ್ಯಾಟಿಂಗ್ ಪ್ರದರ್ಶನ ನೀಡಲು ಹೆಣಗುತ್ತಿರುವ ವೆಸ್ಟ್‌ಇಂಡೀಸ್ ತಂಡವನ್ನು ಭಾರತದ ಬೌಲರ್‌ಗಳು ಬಳಿಕ 13 ಓವರ್‌ಗಳಲ್ಲಿ ಕಾಡಿದರು.

ಅಸಾಧ್ಯ ಗುರಿಯನ್ನು ಬೆನ್ನಟ್ಟಿರುವ ವೆಸ್ಟ್‌ಇಂಡೀಸ್ ತಂಡ ದಿನದಾಟದ ಅಂತ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತ್ತು. ಮೂರನೇ ದಿನದ ಮೊದಲ ಅವಧಿಯಲ್ಲೇ ಅತಿಥೇಯರನ್ನು ಕೇವಲ 117 ರನ್‌ಗಳಿಗೆ ನಿಯಂತ್ರಿಸಿ, 299 ರನ್‌ಗಳ ಭರ್ಜರಿ ಮುನ್ನಡೆಯೊಂದಿಗೆ ಫಾಲೊ ಆನ್ ಹೇರುವ ಅವಕಾಶವಿದ್ದರೂ, ಭಾರತ ಫಾಲೋ ಆನ್ ಹೇರಲಿಲ್ಲ.

ವೆಸ್ಟ್‌ಇಂಡೀಸ್‌ನ ವೇಗದ ಬೌಲರ್‌ಗಳ ಉತ್ತಮ ಪ್ರದರ್ಶನದಿಂದಾಗಿ ಕೊಹ್ಲಿ ಪಡೆ ರನ್ ಗಳಿಸಲು ಹೆಣಗಾಡಬೇಕಾಯಿತು. ಚಹಾ ವಿರಾಮದ ವೇಳೆಗೆ ಭಾರತ 37 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿತ್ತು. ಆದರೆ ಕೊನೆಯ ಅವಧಿಯಲ್ಲಿ ರಹಾನೆ ಹಾಗೂ ವಿಹಾರಿ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದರು.

ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾಗಿ ಕಾಡಿದ ಕೆಮರ್ ರೂಚ್ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಹಾರಿ 76 ಎಸೆತಗಳಲ್ಲಿ ಎಂಟು ಬೌಂಡರಿ ಗಳಿಸಿದರು. ರಹಾನೆ ಕೂಡಾ 109 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News