ಏಕೈಕ ಟೆಸ್ಟ್: ಬಾಂಗ್ಲಾ ವಿರುದ್ಧ ಅಫ್ಘಾನಿಸ್ತಾನ ಬಿಗಿ ಹಿಡಿತ

Update: 2019-09-07 17:49 GMT

ಚಿತ್ತಗಾಂಗ್, ಸೆ.7: ಇಬ್ರಾಹೀಂ ಝದ್ರಾನ್ ಹಾಗೂ ಅಸ್ಘರ್ ಅಫ್ಘಾನ್ ಅರ್ಧಶತಕಗಳ ಕೊಡುಗೆ ಹಾಗೂ ರಶೀದ್ ಖಾನ್ ಐದು ವಿಕೆಟ್ ಗೊಂಚಲು ನೆರವಿನಿಂದ ಅಫ್ಘಾನಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಪಂದ್ಯ ಆಡುತ್ತಿರುವ ಅಫ್ಘಾನಿಸ್ತಾನ ಶನಿವಾರ ಮೂರನೇ ದಿನದಾಟದಂತ್ಯಕ್ಕೆ 8 ವಿಕೆಟ್‌ಗಳ ನಷ್ಟಕ್ಕೆ 237 ರನ್ ಗಳಿಸಿದೆ. ಒಟ್ಟು 374 ರನ್ ಮುನ್ನಡೆಯಲ್ಲಿರುವ ಅಫ್ಘಾನಿಸ್ತಾನ ತಂಡ ಬಾಂಗ್ಲಾಕ್ಕೆ ಕಠಿಣ ಗುರಿ ವಿಧಿಸುವತ್ತ ಚಿತ್ತವಿರಿಸಿದೆ.

ಚೊಚ್ಚಲ ಪಂದ್ಯ ಆಡಿದ ಆರಂಭಿಕ ಆಟಗಾರ ಝದ್ರಾನ್ 2ನೇ ಇನಿಂಗ್ಸ್ ನಲ್ಲಿ 208 ಎಸೆತಗಳಲ್ಲಿ 87 ರನ್ ಗಳಿಸಿದರೆ, ಮಾಜಿ ನಾಯಕ ಅಫ್ಘಾನ್ 108 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಮೂಲಕ ಪಂದ್ಯದಲ್ಲಿ ಸತತ 2ನೇ ಅರ್ಧಶತಕ ದಾಖಸಿದರು. ನಾಯಕ ರಶೀದ್(24,22 ಎಸೆತ) ಹಾಗೂ ಅಫ್ಸರ್ ಝಝೈ(ಔಟಾಗದೆ 34 ರನ್)ಅಫ್ಘಾನಿಸ್ತಾನದ ಮುನ್ನಡೆಯನ್ನು ಹೆಚ್ಚಿಸಿದರು.

ಝದ್ರಾನ್ ಹಾಗೂ ಅಫ್ಘಾನ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 108 ರನ್ ಗಳಿಸಿ 28 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾದರು.

 ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಸಹಿತ ಒಟ್ಟು ಮೂರು ವಿಕೆಟ್‌ಗಳನ್ನು ಉರುಳಿಸಿದ ನಾಯಕ ಶಾಕಿಬ್ ಅಲ್ ಹಸನ್(3-53)ಯಶಸ್ವಿ ಬೌಲರ್ ಎನಿಸಿಕೊಂಡರು. ನಯೀಮ್ ಹಸನ್(2-61) ಹಾಗೂ ತೈಜುಲ್ ಇಸ್ಲಾಂ(2-68)ತಲಾ ಎರಡು ವಿಕೆಟ್ ಪಡೆದರು. ರಶೀದ್‌ಗೆ ಐದು ವಿಕೆಟ್ ಗೊಂಚಲು: ಇದಕ್ಕೂ ಮೊದಲು 8 ವಿಕೆಟ್ ನಷ್ಟಕ್ಕೆ 194 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ 205 ರನ್‌ಗೆ ಆಲೌಟಾಯಿತು.

 55 ರನ್‌ಗೆ 5 ವಿಕೆಟ್ ಗೊಂಚಲು ಪಡೆದ ರಶೀದ್ ಆತಿಥೇಯರನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.ನಾಯಕ ರಶೀದ್‌ಗೆ ಉತ್ತಮ ಸಾಥ್ ನೀಡಿದ ಮುಹಮ್ಮದ್ ನಬಿ 56 ರನ್‌ಗೆ 3 ವಿಕೆಟ್‌ಗಳನ್ನು ಪಡೆದರು. ಔಟಾಗದೆ 44 ರನ್‌ನಿಂದ ಬ್ಯಾಟಿಂಗ್ ಮುಂದುರಿಸಿದ ಮೊಸಾಡೆಕ್ ಹುಸೇನ್ ನಿನ್ನೆಯ ಮೊತ್ತಕ್ಕೆ ಕೇವಲ 4 ರನ್ ಗಳಿಸಿ ಔಟಾಗದೆ ಉಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News