ಇಂಡಿಯಾ ರೆಡ್ ದುಲೀಪ್ ಟ್ರೋಫಿ ಚಾಂಪಿಯನ್

Update: 2019-09-07 17:52 GMT

ಬೆಂಗಳೂರು, ಸೆ.7: ವಿದರ್ಭದ ಆಫ್ ಸ್ಪಿನ್ನರ್ ಅಕ್ಷಯ್ ವಾಖರೆ (5-13)ದಾಳಿಯ ನೆರವಿನಲ್ಲಿ ಇಂಡಿಯಾ ಗ್ರೀನ್ ತಂಡವನ್ನು 38 ರನ್‌ಗಳ ಅಂತರದಲ್ಲಿ ಬಗ್ಗು ಬಡಿದ ಇಂಡಿಯಾ ರೆಡ್ ದುಲೀಪ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ದಿಲೀಪ್ ಟ್ರೋಫಿ ಫೈನಲ್‌ನ ಅಂತಿಮ ದಿನವಾಗಿರುವ ಶನಿವಾರ ಇಂಡಿಯಾ ಗ್ರೀನ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಇಂಡಿಯಾ ರೆಡ್ 39.5 ಓವರ್‌ಗಳಲ್ಲಿ 119 ರನ್‌ಗಳಿಗೆ ನಿಯಂತ್ರಿಸಿ ಗೆಲುವಿನ ನಗೆ ಬೀರಿತು.

ಇಂಡಿಯಾ ರೆಡ್ ಪರ ಶತಕ ದಾಖಲಿಸಿದ್ದ ಅಭಿಮನ್ಯು ಈಶ್ವರನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೂರನೇ ದಿನದಾಟದಂತ್ಯಕ್ಕೆ 116 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 345 ರನ್ ಗಳಿಸಿದ್ದ ಇಂಡಿಯಾ ರೆಡ್ ಇಂದು ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿ 43 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಜೈದೇವ್ ಉನಾದ್ಕಟ್ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರೊಂದಿಗೆ 30 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಆದಿತ್ಯ ಸರ್ವಾಟೆ ಈ ಮೊತ್ತಕ್ಕೆ 8 ರನ್ ಸೇರಿಸಿ ಔಟಾದರು. ಅವೇಶ್ ಖಾನ್ 12 ರನ್ ಮತ್ತು ಸಂದೀಪ್ ವಾರಿಯರ್ 1 ರನ್ ಗಳಿಸಿ ಔಟಾದರು.

ಧರ್ಮೆಂದ್ರ ಸಿನ್ಹಾ ಜಡೇಜ ಮತ್ತು ಅಂಕಿತ್ ರಜಪೂತ್ ತಲಾ 3 ವಿಕೆಟ್, ತನ್ವೀರ್ ಉಲ್ ಹಕ್ 2 ವಿಕೆಟ್, ಮಾಯಾಂಕ್ ಮರ್ಕೆಂಡೆ ಮತ್ತು ಧ್ರುವ್ ಶೋರೆ ತಲಾ 1 ವಿಕೆಟ್ ಹಂಚಿಕೊಂಡರು.

ಗೆಲುವಿಗೆ 158 ರನ್ ಗಳಿಸಬೇಕಿದ್ದ ಇಂಡಿಯಾ ಗ್ರೀನ್ ತಂಡ ಅಕ್ಷಯ್ ವಾಖರೆ ಮತ್ತು ಅವೇಶ್ ಖಾನ್ ದಾಳಿಗೆ ತತ್ತರಿಸಿ ಬೇಗನೆ ಇನಿಂಗ್ಸ್ ಮುಗಿಸುವ ಮೂಲಕ ಗೆಲುವಿನ ಅವಕಾಶವನ್ನು ಕೈ ಚೆಲ್ಲಿತು.

ಸಿದ್ದೇಶ್ ಲಾಡ್ 42 ರನ್ ಗಳಿಸಿರುವುದು ತಂಡದ ಪರ ದಾಖಲಾಗಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ನಾಯಕ ಫೈಝ್ ಫಝಲ್ 10ರನ್, ಅಕ್ಷತ್ ರೆಡ್ಡಿ 33 ರನ್ ಗಳಿಸಿದರು. ಧ್ರುವ್ 5ರನ್, ಆಕಾಶ್‌ದೀಪ್‌ನಾಥ್ 4ರನ್, ಅಕ್ಷಯ ವಾಡೇಕರ್ 7ರನ್, ಧರ್ಮೆಂದ್ರ ಜಡೇಜ 7ರನ್, ತನ್ವೀರ್ 4ರನ್, ರಾಜೇಶ್ ಮೊಹಾಂತಿ ಔಟಾಗದೆ 4 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News