ಲಸಿತ್ ಮಾಲಿಂಗಗೆ ಭಢ್ತಿ

Update: 2019-09-07 17:57 GMT

ಪಲ್ಲೆಕಲೆ,ಸೆ.7: ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ 20 ಸ್ಥಾನ ಮೇಲಕ್ಕೇರಿ ಶನಿವಾರ ಬಿಡುಗಡೆಯಾದ ಐಸಿಸಿ ಟಿ-20 ರ್ಯಾಂಕಿಂಗ್‌ನಲ್ಲಿ 21ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಉರುಳಿಸಿದ್ದ ಏಕೈಕ ಬೌಲರ್ ಆಗಿರುವ ಮಾಲಿಂಗ ಕಿವೀಸ್ ವಿರುದ್ಧ 3ನೇ ಟಿ-20 ಪಂದ್ಯದಲ್ಲಿ 4 ಓವರ್‌ಗಳಲ್ಲಿ 6 ರನ್ ನೀಡಿ ಐದು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಲಂಕೆಗೆ 37 ರನ್ ಗೆಲುವು ತಂದಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದನೇ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.

ಬೌಲಿಂಗ್ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಲೆಗ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಆರು ಸ್ಥಾನ ಭಡ್ತಿ ಪಡೆದು 5ನೇ ಸ್ಥಾನಕ್ಕೇರಿದರು. 8ನೇ ಸ್ಥಾನದಲ್ಲಿರುವ ಕುಲದೀಪ್ ಯಾದವ್ ಅಗ್ರ-10ರಲ್ಲಿರುವ ಭಾರತದ ಏಕೈಕ ಬೌಲರ್ ಆಗಿದ್ದಾರೆ. ಪಾಕಿಸ್ತಾನದ ಬಾಬರ್ ಆಝಂ ಅಗ್ರ ರ್ಯಾಂಕಿನ ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ 7 ಹಾಗೂ 9ನೇ ಸ್ಥಾನದಲ್ಲಿದ್ದಾರೆ.

ಇತ್ತೀಚೆಗಷ್ಟೇ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್‌ಗೆ ಬಿಟ್ಟುಕೊಟ್ಟಿದ್ದ ಭಾರತ ನಾಯಕ ವಿರಾಟ್ ಕೊಹ್ಲಿ ಟಿ-20 ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆಯಲೂ ವಿಫಲರಾಗಿದ್ದಾರೆ. ಅವರು 12ನೇ ರ್ಯಾಂಕಿನಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News