ಪಾಕ್: ಅಪಹೃತ ಬಾಲಕಿ ಇನ್ನೂ ಮನೆಗೆ ವಾಪಸಾಗಿಲ್ಲ: ಸಿಖ್ ಸಂಘಟನೆ ಅಧಿಕಾರಿ

Update: 2019-09-07 18:12 GMT

ಲಾಹೋರ್, ಸೆ. 7: ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ಅಪಹರಣಕ್ಕೊಳಗಾಗಿರುವ ಸಿಖ್ ಬಾಲಕಿ ಇನ್ನೂ ಮನೆಗೆ ವಾಪಸಾಗಿಲ್ಲ ಎಂದು ಪಾಕಿಸ್ತಾನ್ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯ ಮಹಾಕಾರ್ಯದರ್ಶಿ ಅಮೀರ್ ಸಿಂಗ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಲಾಹೋರ್‌ನಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ನನ್‌ಕಾನ ಸಾಹಿಬ್ ನಿವಾಸಿ ಬಾಲಕಿ ಜಗ್ಜೀತ್ ಕೌರ್‌ರನ್ನು ಅದೇ ಊರಿನ ಮುಸ್ಲಿಮ್ ವ್ಯಕ್ತಿಯೊಬ್ಬ ಕಳೆದ ವಾರ ಅಪಹರಿಸಿ, ಆಕೆಯನ್ನು ಬಲವಂತವಾಗಿ ಮತಾಂತರಿಸಿ, ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿ ಲಾಹೋರ್‌ನ ದಾರುಲ್ ಅಮಾನ್ ಆಶ್ರಯಧಾಮದಲ್ಲಿ ಇದ್ದಾರೆ ಹಾಗೂ ಹೆತ್ತವರ ಮನೆಗೆ ಇನ್ನೂ ವಾಪಸಾಗಿಲ್ಲ ಎಂದು ಅಮೀರ್ ಸಿಂಗ್ ಹೇಳಿದರು.

ಬಾಲಕಿ ಮನೆಗೆ ಮರಳಿದ್ದಾರೆ ಎಂಬುದಾಗಿ ಪಾಕಿಸ್ತಾನ್ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶವೊಂದನ್ನು ಹಾಕಲಾಗಿತ್ತು.

‘‘ಈ ಟ್ವೀಟನ್ನು ಯಾರು ಹಾಕಿದ್ದಾರೆ ಹಾಗೂ ಅದನ್ನು ಯಾರು ನಿಭಾಯಿಸುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ’’ ಎಂದು ಅವರು ಹೇಳಿದರು.

‘‘ನಾನು ಪಾಕಿಸ್ತಾನ್ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯ ಮಹಾ ಕಾರ್ಯದರ್ಶಿ. ನಾವು ಇಂಥ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಹಾಕಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News