ಸಿಪಿಎಲ್ ಟಿ-20 ಪಂದ್ಯದಲ್ಲಿ ಹರಿದ ರನ್ ಹೊಳೆ, ಗೇಲ್ 22ನೇ ಶತಕ ವ್ಯರ್ಥ

Update: 2019-09-11 17:42 GMT

► ಎಲ್ಲ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಚೇಸಿಂಗ್

ಜಮೈಕಾ,ಸೆ.11: ಗರಿಷ್ಠ ರನ್‌ಗಳಿಗೆ ಸಾಕ್ಷಿಯಾದ ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಜಮೈಕಾ ತಲ್ಲಾವಾಸ್ ತಂಡವನ್ನು ಸೈಂಟ್ ಕಿಟ್ಸ್ ಹಾಗೂ ನೇವಿಸ್ ಪ್ಯಾಟ್ರಿಯೊಟ್ಸ್ ತಂಡ ಮಣಿಸಿತು. ಜಮೈಕಾದ ಪರ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಸಿಡಿಸಿದ 22ನೇ ಟಿ-20 ಶತಕ ವ್ಯರ್ಥವಾಯಿತು.

ಗೇಲ್ ಶತಕದ ನೆರವಿನಿಂದ ಜಮೈಕಾ ತಂಡ ಎದುರಾಳಿ ಸೈಂಟ್ ಕಿಟ್ಸ್ ಗೆಲುವಿಗೆ 20 ಓವರ್‌ಗಳಲ್ಲಿ 242 ರನ್ ಕಠಿಣ ಗುರಿ ನೀಡಿತು. ಸೈಂಟ್ ಕಿಟ್ಸ್ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ರನ್ ಚೇಸಿಂಗ್ ಮಾಡಿ ಗಮನ ಸೆಳೆಯಿತು. ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಇದು ಎರಡನೇ ಗರಿಷ್ಠ ರನ್ ಚೇಸಿಂಗ್ ಆಗಿದೆ. ಕಳೆದ ವರ್ಷ ಆಕ್ಲಂಡ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯ 5 ವಿಕೆಟ್‌ಗಳ ನಷ್ಟಕ್ಕೆ 245 ರನ್ ಗಳಿಸಿ ಗರಿಷ್ಠ ರನ್ ಚೇಸಿಂಗ್ ಮಾಡಿದ ಸಾಧನೆ ಮಾಡಿತ್ತು. ಇದು ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ದಾಖಲಾದ 4ನೇ ಗರಿಷ್ಠ ಸ್ಕೋರಾಗಿದೆ.

ಉಭಯ ತಂಡಗಳು ಒಟ್ಟು 37 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಟಿ-20 ಪಂದ್ಯದ ಗರಿಷ್ಠ ಸಿಕ್ಸರ್‌ಗಳ ದಾಖಲೆಯನ್ನು ಸರಿಗಟ್ಟಿದವು.

ಗೇಲ್ ಕೇವಲ 67 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್‌ಗಳ ಸಹಿತ 116 ರನ್ ಗಳಿಸಿದರು. ಟಿ-20 ಕ್ರಿಕೆಟ್‌ನಲ್ಲಿ 22ನೇ ಶತಕ ಸಿಡಿಸಿ ಅದ್ವಿತೀಯ ದಾಖಲೆಯನ್ನು ತನ್ನ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ಪಟ್ಟಿಯಲ್ಲಿ ಗೇಲ್ ಬಳಿಕ ಮೈಕಲ್ ಕ್ಲಿಂಜರ್(8) ಅವರಿದ್ದಾರೆ. ಗೇಲ್ ಅವರು ಚಾಡ್ವಿಕ್ ವಾಲ್ಟನ್(76 ರನ್, 36 ಎಸೆತ)ಜೊತೆ 162 ರನ್ ಜೊತೆಯಾಟ ನಡೆಸಿದರು.

ಕಠಿಣ ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಸೈಂಟ್ ಕಿಟ್ಸ್ ಪರ ಓಪನರ್‌ಗಳಾದ ಎವಿನ್ ಲೂವಿಸ್ ಹಾಗೂ ಡಿವೊನ್ ಥಾಮಸ್ ಮೊದಲ 5 ಓವರ್‌ಗಳಲ್ಲಿ 80 ರನ್ ಕಲೆ ಹಾಕಿದರು. ಲೂವಿಸ್ ಕೇವಲ 18 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಗಳ ಸಹಿತ 53 ರನ್ ಸಿಡಿಸಿದರು. ಲೂವಿಸ್ ಹಾಗೂ ಥಾಮಸ್ ಔಟಾದ ಬಳಿಕ ಎವನ್ಸ್ ಹಾಗೂ ಫ್ಯಾಬಿಯನ್ ಅಲ್ಲೆನ್ ಕೇವಲ 40 ಎಸೆತಗಳಲ್ಲಿ 76 ರನ್ ಜೊತೆಯಾಟ ನಡೆಸಿದರು. ಸೈಂಟ್ ಕಿಟ್ಸ್‌ಗೆ 11 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಒಂದು ಸಿಕ್ಸರ್ ಹಾಗೂ 2 ಬೌಂಡರಿ ಗಳಿಸಿದ ಕ್ಯಾಂಪ್‌ಬೆಲ್ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News