ಸಿಂಧು ಸಹಿತ 11 ಕ್ರೀಡಾಪಟುಗಳಿಗೆ ಪದ್ಮ ಪ್ರಶಸ್ತಿ

Update: 2019-09-12 18:02 GMT

ಹೊಸದಿಲ್ಲಿ, ಸೆ.12: ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿಕೋಮ್‌ರನ್ನು ಪದ್ಮ ವಿಭೂಷಣ ಹಾಗೂ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುರನ್ನು ಪದ್ಮ ಭೂಷಣ ಪ್ರಶಸ್ತಿಗೆ ಭಾರತೀಯ ಕ್ರೀಡಾ ಸಚಿವಾಲಯ ಇಂದು ಶಿಫಾರಸು ಮಾಡಿದೆ. ಮೇರಿಕೋಮ್, ಸಿಂಧು ಸಹಿತ ಒಟ್ಟು 11 ಕ್ರೀಡಾಪಟುಗಳು ಪದ್ಮಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಏಳು ಮಹಿಳಾ ಕ್ರೀಡಾಪಟುಗಳಿದ್ದು, ಕೊನೆಯ ಕ್ಷಣದಲ್ಲಿ ಆರ್ಚರ್ ತರುಣ್ ದೀಪ್‌ರಾಯ್ ಹಾಗೂ ಹಾಕಿ ಒಲಿಂಪಿಯನ್ ಎಂ.ಪಿ. ಗಣೇಶ್ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಮಣಿಪುರದ ಬಾಕ್ಸರ್ ಮೇರಿಕೋಮ್ ‘ಭಾರತ ರತ್ನ’ ಬಳಿಕ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣಕ್ಕೆ ಕ್ರೀಡಾ ಸಚಿವಾಲಯದಿಂದ ಶಿಫಾರಸುಗೊಂಡಿರುವ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಮೇರಿ ದಾಖಲೆ ಆರು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾರೆ.

36ರ ಹರೆಯದ ಮೇರಿಕೋಮ್ ಪದ್ಮ ವಿಭೂಷಣ ಸ್ವೀಕರಿಸಲಿರುವ ಭಾರತದ ನಾಲ್ಕನೇ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಲು ಸಜ್ಜಾಗಿದ್ದಾರೆ. ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್(2007),ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್(2008) ಹಾಗೂ ಪರ್ವತಾರೋಹಿ ಸರ್ ಎಡ್ಮಂಡ್ ಹಿಲರಿ(2008)ಈ ಹಿಂದೆ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು. ಮೇರಿಕೋಮ್ 2013ರಲ್ಲಿ ಪದ್ಮಭೂಷಣ ಹಾಗೂ 2006ರಲ್ಲಿ ಪದ್ಮ ಶ್ರೀ ಗೌರವಕ್ಕೆ ಪಾತ್ರರಾಗಿದ್ದರು.

ಆಗಸ್ಟ್‌ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಜಯಿಸಿದ ಭಾರತದ ಮೊದಲ ಅಥ್ಲೀಟ್ ಆಗಿರುವ ಸಿಂಧು ದೇಶದ ಮೂರನೇ ಉನ್ನತ ನಾಗರಿಕ ಗೌರವ ಪದ್ಮಭೂಷಣಕ್ಕೆ ಶಿಫಾರಸುಗೊಂಡಿದ್ದಾರೆ. 24ರ ಹರೆಯದ ಹೈದರಾಬಾದ್ ಆಟಗಾರ್ತಿ ಸಿಂಧು 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು. 2017ರಲ್ಲಿ ಸಿಂಧು ಹೆಸರನ್ನು ಪದ್ಮಭೂಷಣಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಅವರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಇದೇ ವೇಳೆ, ಆರ್ಚರ್ ತರುಣ್‌ದೀಪ್, ಹಾಕಿ ಒಲಿಂಪಿಯನ್ ಎಂ.ಪಿ. ಗಣೇಶ್, ಕುಸ್ತಿಪಟು ವಿನೇಶ್ ಪೋಗಾಟ್, ಟೇಬಲ್ ಟೆನಿಸ್ ಸ್ಟಾರ್ ಮಣಿಕಾ ಬಾತ್ರಾ, ಕ್ರಿಕೆಟ್ ನಾಯಕಿ ಹರ್ಮನ್‌ಪ್ರೀತ್ ಕೌರ್(ಟಿ-20), ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್, ಮಾಜಿ ಶೂಟರ್ ಸುಮಾ ಶಿರೂರ್ ಹಾಗೂ ಪರ್ವರೋಹಿಗಳಾದ, ಅವಳಿ ಸಹೋದರಿಯರಾದ ತಾಶಿ ಹಾಗೂ ನಂಗ್ಶಿ ಮಲಿಕ್ ಹೆಸರುಗಳನ್ನು ದೇಶದ ನಾಲ್ಕನೇ ನಾಗರಿಕ ಗೌರವ ಪದ್ಮಶ್ರೀಗೆ ಶಿಫಾರಸು ಮಾಡಿ ಕಳುಹಿಸಿಕೊಡಲಾಗಿದೆ.

ಈ ವರ್ಷ ಹಾಲೆಂಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ರಿಕರ್ವ್ ಟೀಮ್ ಪರ ಬೆಳ್ಳಿ ಪದಕ ಜಯಿಸಿದ್ದ ರಾಯ್ ಹಾಗೂ 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಗಣೇಶ್ ಹೆಸರನ್ನು ತಡವಾಗಿ ಪಟ್ಟಿಗೆ ಸೇರಿಸಲಾಗಿದ್ದು, ಈ ಇಬ್ಬರ ಹೆಸರನ್ನು ಕ್ರೀಡಾ ಸಚಿವ ಕಿರಣ್ ರಿಜಿಜು ಇನ್ನಷ್ಟೇ ಮಾನ್ಯ ಮಾಡಬೇಕಾಗಿದೆ. ಶಿಫಾರಸುಗಳ ಪಟ್ಟಿಯನ್ನು ಪದ್ಮ ಪ್ರಶಸ್ತಿ ಸಮಿತಿಗೆ ಕಳುಹಿಸಿಕೊಡಲಾಗಿದೆ. ಮುಂದಿನ ವರ್ಷ ನಡೆಯಲಿರುವ ಗಣರಾಜ್ಯೋತ್ಸವಕ್ಕಿಂತ ಮೊದಲು ಪ್ರಶಸ್ತಿಗೆ ಆಯ್ಕೆಯಾಗಿರುವ ಅಥ್ಲೀಟ್‌ಗಳ ಹೆಸರನ್ನು ಸಮಿತಿ ಘೋಷಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News