ಶುಭಮನ್ ಗಿಲ್ ಅವಕಾಶ ಪಡೆದದ್ದು ಹೇಗೆ ?

Update: 2019-09-12 18:05 GMT

 ನಾನೀಗ ತಿರುವನಂತಪುರದಲ್ಲಿದ್ದೇನೆ. ಆಫ್ರಿಕ ಎ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯ ಮುಗಿದ ಬಳಿಕ ಕೊಠಡಿಗೆ ವಾಪಸಾಗುತ್ತಿದ್ದಾಗ ನನಗೆ ತಂಡದ ಸಹ ಆಟಗಾರರು ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಸುದ್ದಿ ತಿಳಿಸಿದರು. ಕೂಡಲೇ ನಾನು ಮೊಬೈಲ್ ಫೋನ್ ಕೈಗೆತ್ತಿಕೊಂಡು ನೋಡಿದೆ. ಆಗ ನನಗೆ ಆನೇಕ ಮಿಸ್ ಕಾಲ್ ಮತ್ತು ಸಂದೇಶಗಳು ಬಂದಿತ್ತು. ಇದರಿಂದ ನನಗೆ ಸಂತಸವಾಗಿದೆ. ಆಡಲು ಅವಕಾಶ ಸಿಕ್ಕಿದರೆ ಉತ್ತಮ ಕೊಡುಗೆ ನೀಡಲು ಪ್ರಯತ್ನಿಸುವೆ. ನೀಲಿ (ಏಕದಿನ ತಂಡ) ಅಥವಾ ಬಿಳಿ(ಟೆಸ್ಟ್ ತಂಡ) ಆಗಿರಲಿ ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಗೌರವದ ವಿಚಾರವಾಗಿದೆ.

 -ಶುಭಮನ್ ಗಿಲ್

ಹೊಸದಿಲ್ಲಿ, ಸೆ.12: ಯುವ ಅಗ್ರ ಸರದಿಯ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಮುಂಬರುವ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಅವಕಾಶ ಪಡೆದಿರುವುದೇನೂ ಅಚ್ಚರಿಯ ವಿಚಾರವಲ್ಲ. ಪ್ರತಿಭಾವಂತ ಆಟಗಾರ ಗಿಲ್ ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಭಾರತ ಎ ತಂಡದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಅರ್ಹವಾಗಿಯೇ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಗಿಲ್ 20ರ ಹರೆಯಕ್ಕೆ ಕಾಲಿರಿಸಿ 4 ದಿನಗಳು ಕಳೆದಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕ ಎ ತಂಡದ ವಿರುದ್ಧ 5 ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ ಭಾರತ ಎ ತಂಡ 4-1 ಅಂತರದಲ್ಲಿ ಜಯ ಗಳಿಸಿತ್ತು. ಈ ಸರಣಿಯಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು.

2018ರಲ್ಲಿ ವಿಶ್ವಕಪ್ ಜಯಿಸಿದ ಅಂಡರ್ 19 ತಂಡದ ಸ್ಟಾರ್ ಆಟಗಾರನಾಗಿದ್ದ ಗಿಲ್ ಈ ವರ್ಷದ ಆರಂಭದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ತನ್ನ ಚೊಚ್ಚಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದರೂ, ಕೇವಲ 2 ಇನಿಂಗ್ಸ್‌ಗಳಲ್ಲಿ 16ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಿಲ್ ಉತ್ತಮ ದಾಖಲೆ ಹೊಂದಿದ್ದಾರೆ. 14 ಪಂದ್ಯಗಳಲ್ಲಿ 72.15 ಸರಾಸರಿಯಂತೆ 1,443 ರನ್ ಗಳಿಸಿದ್ದಾರೆ. 4 ಶತಕ ಮತ್ತು 8 ಅರ್ಧ ಶತಕಗಳನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕ ಎ ವಿರುದ್ಧ ಅನಧಿಕೃತ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 90 ರನ್ ಗಳಿಸುವ ಮೂಲಕ ಶತಕ ವಂಚಿತಗೊಂಡಿದ್ದರು. ಭಾರತ ಎ ಈ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಗಳಿಸಿತ್ತು. ಕಳೆದ ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದ ಪರ 204 ರನ್ ಗಳಿಸಿದ್ದರು. ಈ ಎಲ್ಲ ಸಾಧನೆಯ ಹಿನ್ನೆಲೆಯಲ್ಲಿ ಶುಭಮನ್ ಗಿಲ್ ಅವರಿಗೆ 20ನೇ ಹರೆಯದಲ್ಲಿ ಟೆಸ್ಟ್ ತಂಡಕ್ಕೆ ಅವಕಾಶ ಒಲಿದು ಬಂದಿದೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News