ದ.ಆಫ್ರಿಕ ಎ ವಿರುದ್ಧ ಭಾರತ ಎ ತಂಡಕ್ಕೆ ಭರ್ಜರಿ ಜಯ

Update: 2019-09-12 18:09 GMT

ತಿರುವನಂತಪುರ, ಸೆ.12: ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಕೊನೆಯ ದಿನವಾದ ಗುರುವಾರ ದಕ್ಷಿಣ ಆಫ್ರಿಕ ಎ ವಿರುದ್ಧ ಭಾರತ ಎ ತಂಡ ಏಳು ವಿಕೆಟ್‌ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ.

ಎರಡನೇ ಇನಿಂಗ್ಸ್‌ನಲ್ಲಿ ಗುರುವಾರ ಗೆಲ್ಲಲು ಕೇವಲ 48 ರನ್ ಗುರಿ ಪಡೆದಿದ್ದ ಭಾರತ ತಂಡ ನಾಯಕ ಶುಭಮನ್ ಗಿಲ್(5), ಅಂಕಿತ್ ಭಾವ್ನೆ(6) ಹಾಗೂ ಕೆ.ಎಸ್.ಭರತ್(5) ವಿಕೆಟ್‌ಗಳನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಮುಂಬೈ ಆಲ್ ರೌಂಡರ್ ಶಿವಂ ದುಬೆ (ಔಟಾಗದೆ 12) ಹಾಗೂ ರಿಕಿ ಭುಯ್(ಔಟಾಗದೆ 20) ಗೆಲುವಿನ ವಿಧಿವಿಧಾನ ಪೂರೈಸಿದರು. ಸತತ ಎರಡು ಸಿಕ್ಸರ್ ಸಿಡಿಸಿದ ದುಬೆ ತಂಡಕ್ಕೆ ಏಳು ವಿಕೆಟ್‌ಗಳ ಜಯ ತಂದರು.

 ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ದಕ್ಷಿಣ ಆಫ್ರಿಕ ಎ ತಂಡದ ಬೌಲರ್ ಲುಂಗಿ ಗಿಡಿ ಮೊದಲ ಇನಿಂಗ್ಸ್‌ನಲ್ಲಿ 90 ರನ್ ಗಳಿಸಿದ್ದ ಗಿಲ್‌ರನ್ನು 2ನೇ ಇನಿಂಗ್ಸ್‌ನಲ್ಲಿ ಬೇಗನೆ ಔಟ್ ಮಾಡಿದರು. 17 ಎಸೆತಗಳಲ್ಲಿ ಕೇವಲ 6ರನ್ ಗಳಿಸಿದ ಬಾವ್ನೆ ಅವರು ಲುಂಗಿ ಗಿಡಿ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಎಸ್. ಮುತ್ತುಸ್ವಾಮಿಗೆ ವಿಕೆಟ್ ಒಪ್ಪಿಸಿದರು. ಎಡಗೈ ದಾಂಡಿಗ ದುಬೆ ಟೆಸ್ಟ್ ಸರಣಿಗಿಂತ ಮೊದಲು ನಡೆದಿದ್ದ ಅನಧಿಕೃತ ಏಕದಿನ ಸರಣಿಯಲ್ಲಿ ತನ್ನ ಹೊಡಿಬಡಿ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದ ದುಬೆ ಇಂದು, ಎಂಪಿಟ್ ಬೌಲಿಂಗ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ತನ್ನದೇ ಶೈಲಿಯಲ್ಲಿ ಪಂದ್ಯಕ್ಕೆ ಅಂತ್ಯ ಹಾಡಿದರು.

 ದ.ಆಫ್ರಿಕ 186ಕ್ಕೆ ಆಲೌಟ್: ಇದಕ್ಕೂ ಮೊದಲು 9 ವಿಕೆಟ್ ನಷ್ಟಕ್ಕೆ 179 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ದ.ಆಫ್ರಿಕ ಎ ತಂಡ ಕೊನೆಯ ದಿನವಾದ ಗುರುವಾರ ಕೇವಲ 3.5 ಓವರ್‌ಗಳಲ್ಲಿ ಇನ್ನುಳಿದ 1 ವಿಕೆಟನ್ನು ಕಳೆದುಕೊಂಡಿತು. 186 ರನ್‌ಗೆ ಆಲೌಟಾಯಿತು.

ಎರಡನೇ ಇನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳಾದ ಶಹಬಾಝ್ ನದೀಂ(3-17) ಹಾಗೂ ಜಲಜ್ ಸಕ್ಸೇನ(2-22)ಐದು ವಿಕೆಟ್ ಹಂಚಿಕೊಂಡರು. ರಾತ್ರಿ ಸುರಿದ ಮಳೆಯಿಂದಾಗಿ ಬುಧವಾರ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಕೇವಲ 20 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿತ್ತು. ಈ ಅವಧಿಯಲ್ಲಿ 4 ವಿಕೆಟ್ ಉರುಳಿಸಿದ್ದ ಭಾರತ ಗೆಲುವಿನ ಸನಿಹಕ್ಕೆ ತಲುಪಿತ್ತು.

ಗಿಲ್ 90 ರನ್ ಹಾಗೂ ಆಲ್‌ರೌಂಡರ್ ಸಕ್ಸೇನ(ಔಟಾಗದೆ 61)ಅರ್ಧಶತಕಗಳ ನೆರವಿನಿಂದ ಭಾರತ ತಂಡ ದ.ಆಫ್ರಿಕದ ಮೊದಲ ಇನಿಂಗ್ಸ್ 164 ರನ್‌ಗೆ ಉತ್ತರವಾಗಿ 303 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರ್

► ದ.ಆಫ್ರಿಕ ಎ ಮೊದಲ ಇನಿಂಗ್ಸ್ : 164 ರನ್‌ಗೆ ಆಲೌಟ್

► ದ.ಆಫ್ರಿಕ ಎ ಎರಡನೇ ಇನಿಂಗ್ಸ್ :186 ರನ್‌ಗೆ ಆಲೌಟ್ 

► ಭಾರತ ಎ ಮೊದಲ ಇನಿಂಗ್ಸ್: 303 ರನ್‌ಗೆ ಆಲೌಟ್

► ಭಾರತ ಎ ಎರಡನೇ ಇನಿಂಗ್ಸ್: 9.4 ಓವರ್‌ಗಳಲ್ಲಿ 49/3 (ರಿಕಿ ಭುಯ್ ಔಟಾಗದೆ 20, ಶಿವಂ ದುಬೆ ಔಟಾಗದೆ 12, ಲುಂಗಿ ಗಿಡಿ 2-22)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News