ಧೋನಿಯ ನಿವೃತ್ತಿ ವದಂತಿಗೆ ಪುಷ್ಟಿ ನೀಡಿದ ಕೊಹ್ಲಿ ಟ್ವೀಟ್

Update: 2019-09-12 18:12 GMT

ಹೊಸದಿಲ್ಲಿ, ಸೆ.12: ಆಸ್ಟ್ರೇಲಿಯ ವಿರುದ್ಧ 2016ರಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ಸ್ಮರಣೀಯ ಕ್ಷಣವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಭಾರತದ ನಾಯಕ ವಿರಾಟ್ ಕೊಹ್ಲಿ, ಆ ಪಂದ್ಯದಲ್ಲಿ ನಾನು ಫಿಟ್ನೆಸ್ ಟೆಸ್ಟ್ ನಲ್ಲಿ ಓಡುವ ರೀತಿಯಲ್ಲಿ ಓಡಲು ಎಂಎಸ್ ಧೋನಿ ನನಗೆ ಪ್ರೇರೇಪಿಸಿರುವುದನ್ನು ಯಾವುದೇ ಕಾರಣಕ್ಕೂ ಮರೆಯಲಾರೆ ಎಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಟ್ವೀಟ್ ಮಾಡಿರುವ ಸಮಯ ಧೋನಿಯ ನಿವೃತ್ತಿ ವದಂತಿಗೆ ಪುಷ್ಟಿ ನೀಡಿದಂತಾಗಿದೆ. ‘‘ಈ ಪಂದ್ಯವನ್ನು ನಾನು ಮರೆಯಲಾರೆ. ಅದೊಂದು ವಿಶೇಷ ರಾತ್ರಿಯಾಗಿತ್ತು. ಈ ವ್ಯಕ್ತಿ ನಾನು ಫಿಟ್ನೆಸ್ ಟೆಸ್ಟ್‌ನಲ್ಲಿ ಓಡುವ ರೀತಿಯಲ್ಲಿ ಓಡುವಂತೆ ಮಾಡಿದರು’’ಎಂದು ಪಂದ್ಯದ ಚಿತ್ರದೊಂದಿಗೆ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

2016ರ ಟ್ವೆಂಟಿ-20 ವಿಶ್ವಕಪ್‌ನ ಭಾರತ-ಆಸ್ಟ್ರೇಲಿಯ ನಡುವಿನ ಸೂಪರ್-10 ಪಂದ್ಯವನ್ನು ಉಲ್ಲೇಖಿಸಿ ಕೊಹ್ಲಿ ಟ್ವೀಟ್ ಮಾಡಿದ್ದರು. ಆ ಪಂದ್ಯದಲ್ಲಿ ಭಾರತ ಗೆಲ್ಲಲು 161 ರನ್ ಗುರಿ ಪಡೆದಿತ್ತು. 7.4 ಓವರ್‌ಗಳಲ್ಲಿ 49 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ ಕೊಹ್ಲಿ ಹಾಗೂ ಯುವರಾಜ್ ಸಿಂಗ್ 4ನೇ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿದ್ದರು. 14ನೇ ಓವರ್‌ನಲ್ಲಿ ಯುವರಾಜ್ ಸಿಂಗ್ ಆಲ್‌ರೌಂಡರ್ ವಾಟ್ಸನ್‌ಗೆ ವಿಕೆಟ್ ಒಪ್ಪಿಸಿದಾಗ ಭಾರತದ ಸ್ಕೋರ್ 94/4.

ಆಗ ಕೊಹ್ಲಿ ಜೊತೆ ಕೈಜೋಡಿಸಿದ ಧೋನಿ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿದರು. ಈ ಜೊತೆಯಾಟದ ವೇಳೆ ಕೊಹ್ಲಿ ಸಿಂಗಲ್ ಹಾಗೂ ಡಬಲ್‌ನ ಮೂಲಕವೇ ರನ್ ಗಳಿಸಿದರು. ವಿಕೆಟ್ ಮಧ್ಯೆ ಅತ್ಯಂತ ವೇಗವಾಗಿ ಓಡಬಲ್ಲ ಧೋನಿ ಅವರು ಕೊಹ್ಲಿಗೆ ವೇಗವಾಗಿ ಓಡಲು ಉತ್ತೇಜಿಸಿ ಒಂದು ರನ್ ಗಳಿಸುವಲ್ಲಿ ಎರಡು ರನ್ ಗಳಿಸಲು ಪ್ರೇರೇಪಿಸಿದ್ದರು. ಧೋನಿ 10 ಎಸೆತಗಳಲ್ಲಿ 18 ರನ್ ಗಳಿಸಿದ್ದು, ಭಾರತ ಈ ಪಂದ್ಯವನ್ನು ಆರು ವಿಕೆಟ್‌ನಿಂದ ಗೆದ್ದುಕೊಂಡು ಸೆಮಿ ಫೈಲ್‌ಗೆ ತಲುಪಿತ್ತು. ಆದರೆ, ಸೆಮಿ ಫೈನಲ್‌ನಲ್ಲಿ ವಿಂಡೀಸ್ ವಿರುದ್ಧ 7 ವಿಕೆಟ್‌ಗಳಿಂದ ಸೋತಿತ್ತು.

ಇತ್ತೀಚೆಗೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸ್ವದೇಶಕ್ಕೆ ವಾಪಸಾಗಿರುವ ಭಾರತ ಸೆ.15ರಂದು ದಕ್ಷಿಣ ಆಫ್ರಿಕ ವಿರುದ್ಧ ಧರ್ಮಶಾಲಾದಲ್ಲಿ ಮೊದಲ ಟ್ವೆಂಟಿ-20 ಪಂದ್ಯವನ್ನು ಆಡಲಿದೆ. ಧೋನಿ ಎರಡೂ ಸರಣಿಯಲ್ಲಿ ಅಲಭ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News