ಸೌರಭ್ ವರ್ಮಾ ಸೆಮಿ ಫೈನಲ್‌ಗೆ ಪ್ರವೇಶ

Update: 2019-09-13 17:07 GMT

ಹನೊಯ್, ಸೆ.13: ಸ್ಥಳೀಯ ಹೀರೊ ಟಿಯೆನ್ ಮಿನ್ ಗುಯೆನ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಶಟ್ಲರ್ ಸೌರಭ್ ವರ್ಮಾ ವಿಯೆಟ್ನಾ ಓಪನ್ ಬಿಡಬ್ಲುಎಫ್ ಟೂರ್ ಸೂಪರ್-100 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.

ಇಲ್ಲಿ ಶುಕ್ರವಾರ 43 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಸೌರಭ್ ವಿಯೆಟ್ನಾಂ ಆಟಗಾರ ಟಿಯನ್‌ರನ್ನು 21-13, 21-18 ಗೇಮ್‌ಗಳ ಅಂತರದಿಂದ ಮಣಿಸಿದರು. ಆರಂಭದಲ್ಲೇ 4-1 ಮುನ್ನಡೆ ಪಡೆದ ಸೌರಭ ವಿರಾಮದ ವೇಳೆಗೆ 11-6 ಮುನ್ನಡೆ ಕಾಯ್ದುಕೊಂಡಿದ್ದರು. ಮೊದಲ ಗೇಮ್‌ನ್ನು 21-13 ಅಂತರದಿಂದ ಸುಲಭವಾಗಿ ವಶಪಡಿಸಿಕೊಂಡ ಸೌರಭ್ ಎರಡನೇ ಗೇಮ್‌ನಲ್ಲಿ ಎದುರಾಳಿ ಟಿಯನ್‌ರಿಂದ ಒಂದಷ್ಟು ಪ್ರತಿರೋಧ ಎದುರಿಸಿದರು. ಒಂದು ಹಂತದಲ್ಲಿ ವಿಯೆಟ್ನಾಂ ಶಟ್ಲರ್ 11-10 ಮುನ್ನಡೆಯಲ್ಲಿದ್ದರು. ತಕ್ಷಣವೇ ತಿರುಗೇಟು ನೀಡಿದ ಸೌರಭ್ 17-12ರಿಂದ ಮುನ್ನಡೆ ಪಡೆದರು. ಮತ್ತೊಮ್ಮೆ ತಿರುಗಿ ಬಿದ್ದ ಟಿಯೆನ್ ಪಂದ್ಯವನ್ನು 18-19 ಕ್ಕೆ ತಂದರು. ಇನ್ನೂ ಎರಡು ಅಂಕ ಕಲೆ ಹಾಕಿದ ಸೌರಭ್ 2ನೇ ಗೇಮ್‌ನ್ನು 21-18ರಿಂದ ರೋಚಕವಾಗಿ ಗೆದ್ದುಕೊಂಡರು.

ಕಳೆದ ತಿಂಗಳು ಹೈದರಾಬಾದ್ ಓಪನ್ ಪ್ರಶಸ್ತಿ ಜಯಿಸಿರುವ ಹಾಲಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ಮುಂದಿನ ಸುತ್ತಿನಲ್ಲಿ ಜಪಾನ್‌ನ ಮಿನೊರು ಕೊಗಾ ಅಥವಾ ಥಾಯ್ಲೆಂಡ್‌ನ ಟನೊಂಗ್‌ಸಕ್‌ರನ್ನು ಎದುರಿಸಲಿದ್ದಾರೆ.

26ರ ಹರೆಯದ ಸೌರಭ್ ಈ ತಿಂಗಳಾರಂಭದಲ್ಲಿ ನಡೆದ ಚೈನೀಸ್ ತೈಪೆ ಓಪನ್‌ನಲ್ಲಿ ಅಂತಿಮ-16ರ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News