ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಭಾರತದ ಕುಸ್ತಿಪಟುಗಳ ನೀರಸ ಪ್ರದರ್ಶನ

Update: 2019-09-15 14:11 GMT

ನೂರ್-ಸುಲ್ತಾನ್, ಸೆ.15: ಕಝಕ್‌ಸ್ತಾನದ ನೂರ್-ಸುಲ್ತಾನ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೊ-ರೋಮನ್ ವಿಭಾಗದ ಸ್ಪರ್ಧೆಗಳಲ್ಲಿ ಭಾರತದ ಕುಸ್ತಿಪಟುಗಳು ನಿರಾಶಾದಾಯಕ ಪ್ರದರ್ಶನ ತೋರಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ದೊರಕಿದ ಈ ಸುವರ್ಣಾವಕಾಶದಲ್ಲಿ ಭಾರತದ ಮೂವರೂ ಸ್ಪರ್ಧಿಗಳಾದ ಮನೀಶ್(67 ಕಿ.ಗ್ರಾಂ ವಿಭಾಗ), ಸುನಿಲ್ ಕುಮಾರ್(87 ಕಿ.ಗ್ರಾಂ ವಿಭಾಗ) ಮತ್ತು ರವಿ(97 ಕಿ.ಗ್ರಾಂ ವಿಭಾಗ) ಯಾವುದೇ ಹೋರಾಟ ನೀಡದೆ ಇದಿರಾಳಿಗಳಿಗೆ ಶರಣಾದರು.

ಇವರಲ್ಲಿ ಸ್ವಲ್ಪ ಮಟ್ಟಿನ ಚೇತೋಹಾರಿ ಪ್ರದರ್ಶನ ನೀಡಿದ ರವಿ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಒಂದು ಸ್ಪರ್ಧೆ ಗೆದ್ದ ಸಾಧನೆ ತೋರಿದರು. ಚೈನೀಸ್ ತೈಪೆಯ ಚೆಂಗ್ ಹೋಚೆನ್ ಎದುರಿಗಿನ ಸ್ಪರ್ಧೆಯಲ್ಲಿ 5-0 ಅಂಕದಿಂದ ಜಯಿಸಿದ ರವಿ, ಮುಂದಿನ ಸ್ಪರ್ಧೆಯಲ್ಲಿ ಝೆಕ್ ಗಣರಾಜ್ಯದ ಆರ್ಥರ್ ಒಮರೋವ್ ಎದುರು 0-7 ಅಂಕಗಳಿಂದ ಸೋತರು. ಮುಂದಿನ ಸುತ್ತಿನಲ್ಲಿ ಒಮರೋವ್ ಸರ್ಬಿಯಾದ ಮಿಹಾಲಿ ಕಜಾಯಿಯ ಎದುರು ಸೋಲುವುದರೊಂದಿಗೆ ರೆಪೆಚೇಜ್(ವೈಲ್ಡ್‌ಕಾರ್ಡ್‌ನ ರೀತಿಯಲ್ಲಿ ಕುಸ್ತಿಯಲ್ಲಿ ಇರುವ ವ್ಯವಸ್ಥೆ) ಮೂಲಕ ಮುಂದಿನ ಸುತ್ತಿಗೆ ಪ್ರವೇಶಿಸುವ ರವಿಯ ಅವಕಾಶ ಸಮಾಪ್ತಿಯಾಯಿತು.

ಮನೀಶ್ ಬಲ್ಗೇರಿಯಾದ ಡೇವಿಡ್ ಡಿಮಿಟ್ರೋವ್ ಎದುರು ತಾಂತ್ರಿಕ ಶ್ರೇಷ್ಠತೆಯ ಕಾರಣ ಗೆಲುವು ಸಾಧಿಸಿದರೆ, ಸುನಿಲ್ ಅಮೆರಿಕದ ಜೋಸೆಫ್ ಪ್ಯಾಟ್ರಿಕ್ ಎದುರು 0-6 ಅಂತರದಿಂದ ಸೋತು ಹೊರಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News