ಒಂದು ತಿಂಗಳ ಕಾಲ ಅರ್ಧದಷ್ಟು ಸೌದಿ ತೈಲ ಪೂರೈಕೆಯಲ್ಲಿ ವ್ಯತ್ಯಯ

Update: 2019-09-17 16:45 GMT

ದುಬೈ, ಸೆ. 17: ಕಳೆದ ವಾರಾಂತ್ಯದಲ್ಲಿ ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯಿಂದಾಗಿ ತೈಲ ಉತ್ಪಾದನೆಯು ಸುಮಾರು ಅರ್ಧಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ, ಒಂದು ತಿಂಗಳ ಕಾಲ ಸೌದಿ ತೈಲ ಪೂರೈಕೆಯಲ್ಲಿ ದಿನಕ್ಕೆ ಸುಮಾರು 30 ಲಕ್ಷ ಬ್ಯಾರೆಲ್ ಖೋತಾವಾಗಲಿದೆ.

ನಷ್ಟವಾಗಿರುವ ಉತ್ಪಾದನೆಯನ್ನು ಮರಳಿ ಗಳಿಸಲು ‘ಒಪೆಕ್’ ಸಂಘಟನೆಯ ಪ್ರಮುಖ ದೇಶ ಸೌದಿ ಅರೇಬಿಯಕ್ಕೆ ಯಾವಾಗ ಸಾಧ್ಯವಾಗಬಹುದು ಎಂಬ ಬಗ್ಗೆ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ನೆಲೆಸಿರುವ ಹಿನ್ನೆಲೆಯಲ್ಲಿ, ಮಂಗಳವಾರ ತೈಲ ಬೆಲೆಯಲ್ಲಿ ಕೊಂಚ ಕಡಿತವಾದ ಬೆನ್ನಿಗೇ ‘ಎಸ್ ಆ್ಯಂಡ್ ಪಿ ಪ್ಲಾಟ್ಸ್’ ಸಂಸ್ಥೆ ಹೇಳಿದೆ.

ಜಗತ್ತಿನ ಅತಿ ದೊಡ್ಡ ತೈಲ ಸಂಸ್ಕರಣೆ ಸ್ಥಾವರ ಅಬ್ಕಾಯಿಕ್ ಮತ್ತು ಖುರೈಸ್ ತೈಲ ಕ್ಷೇತ್ರದ ಮೇಲೆ ಶನಿವಾರ ನಡೆದ ಡ್ರೋನ್ ದಾಳಿಯ ಬಳಿಕ, ದಿನಕ್ಕೆ 57 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆ ಕುಂಠಿತಗೊಂಡಿದೆ. ಇದು ಜಾಗತಿಕ ಉತ್ಪಾದನೆಯ 6 ಶೇಕಡದಷ್ಟಾಗುತ್ತದೆ.

‘‘ಈ ಹಂತದಲ್ಲಿ, ಕನಿಷ್ಠ ಒಂದು ತಿಂಗಳ ಕಾಲ ದಿನಕ್ಕೆ ಸುಮಾರು 30 ಲಕ್ಷ ಬ್ಯಾರೆಲ್ ಸೌದಿ ಅರೇಬಿಯ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದನಿಸುತ್ತದೆ’’ ಎಂದು ‘ಎಸ್ ಆ್ಯಂಡ್ ಪಿ ಪ್ಲಾಟ್ಸ್’ ವರದಿಯೊಂದರಲ್ಲಿ ಹೇಳಿದೆ.

ಸೌದಿ ಅರೇಬಿಯವು ದಿನಕ್ಕೆ ಸುಮಾರು 99 ಲಕ್ಷ ಬ್ಯಾರೆಲ್ ತೈಲವನ್ನು ಉತ್ಪಾದಿಸುತ್ತದೆ ಹಾಗೂ ಈ ಪೈಕಿ ಸುಮಾರು 70 ಲಕ್ಷ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತದೆ.

ನಮಗೆ ಮಧ್ಯಪ್ರಾಚ್ಯದ ತೈಲ ಅಗತ್ಯವಿಲ್ಲ: ಟ್ರಂಪ್

ಅಮೆರಿಕ ಈಗ ದೊಡ್ಡ ತೈಲ ಉತ್ಪಾದಕ ದೇಶವಾಗಿದ್ದು, ಅದಕ್ಕೆ ಮಧ್ಯ ಪ್ರಾಚ್ಯದ ತೈಲ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

‘‘ಒಟ್ಟಾರೆಯಾಗಿ, ನಾವು ಈಗಲೂ ಸ್ವಲ್ಪ ತೈಲವನ್ನು ಆಮದು ಮಾಡುತ್ತಿದ್ದೇವೆ ಹಾಗೂ ಜಾಗತಿಕ ಮಾರುಕಟ್ಟೆಯ ಪರಿಣಾಮಗಳು ನಮಗೆ ತಟ್ಟುವುದಿಲ್ಲ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತನಿಖೆಯಲ್ಲಿ ಭಾಗವಹಿಸುವಂತೆ ಜಾಗತಿಕ ಪರಿಣತರಿಗೆ ಸೌದಿ ಕರೆ

  ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯ ತನಿಖೆಯಲ್ಲಿ ಭಾಗವಹಿಸುವಂತೆ ಸೌದಿ ಅರೇಬಿಯವು ವಿಶ್ವಸಂಸ್ಥೆಯ ಪರಿಣತರು ಸೇರಿದಂತೆ ಅಂತರ್‌ರಾಷ್ಟ್ರೀಯ ಪರಿಣತರನ್ನು ಆಹ್ವಾನಿಸುತ್ತದೆ ಹಾಗೂ ಈ ದಾಳಿಯ ಹಿಂದೆ ಇರುವವರನ್ನು ಖಂಡಿಸುವಂತೆ ಜಗತ್ತಿಗೆ ಕರೆ ನೀಡುತ್ತದೆ ಎಂದು ಸೌದಿ ಅರೇಬಿಯದ ವಿದೇಶ ಸಚಿವಾಲಯ ಸೋಮವಾರ ಹೇಳಿದೆ.

ದಾಳಿಯಲ್ಲಿ ಇರಾನ್‌ನ ಶಸ್ತ್ರಗಳನ್ನು ಬಳಸಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವಿದೇಶ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

‘‘ತನ್ನ ಜಮೀನು ಮತ್ತು ಜನರನ್ನು ರಕ್ಷಿಸುವ ಹಾಗೂ ಈ ದಾಳಿಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಸೌದಿ ಅರೇಬಿಯ ಹೊಂದಿದೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News