ಸೌದಿ ಮೇಲಿನ ದಾಳಿಯ ಹಿಂದೆ ಇರಾನ್ ಇರುವ ಸಾಧ್ಯತೆ; ಆದರೆ ಯುದ್ಧ ಬಯಸುವುದಿಲ್ಲ: ಟ್ರಂಪ್

Update: 2019-09-17 16:51 GMT

ವಾಶಿಂಗ್ಟನ್, ಸೆ. 17: ಕಳೆದ ವಾರಾಂತ್ಯದಲ್ಲಿ ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯ ಹಿಂದೆ ಇರಾನ್ ಇರುವಂತೆ ಅನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ನಾನು ಯಾರೊಂದಿಗೂ ಯುದ್ಧ ಬಯಸುವುದಿಲ್ಲ ಎಂದು ಹೇಳಿದ್ದಾರೆ.

‘‘ನಮಗೆ ಅದು ಬಹುತೇಕ ಈಗಾಗಲೇ ಖಚಿತವಾಗಿದೆ. ಆದರೆ, ಅಮೆರಿಕಕ್ಕೆ ಇನ್ನೂ ಹೆಚ್ಚಿನ ಪುರಾವೆ ಬೇಕು’’ ಎಂದು ಸೋಮವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ಈ ದಾಳಿಯನ್ನು ಯಾರು ಮಾಡಿದ್ದಾರೆ ಎನ್ನುವುದನ್ನು ನಾವು ಖಚಿತವಾಗಿ ಪತ್ತೆಹಚ್ಚಲು ಬಯಸುತ್ತೇವೆ’’ ಎಂದು ಅವರು ತಿಳಿಸಿದರು.

► ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ: ಇರಾನ್ ಪರಮೋಚ್ಛ ನಾಯಕ

ಟೆಹರಾನ್, ಸೆ. 17: ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಗಳ ಹಿಂದೆ ಇರಾನ್ ಇದೆ ಎಂದು ಅಮೆರಿಕ ಆರೋಪಿಸಿದ ಬಳಿಕ, ಇರಾನ್ ಮತ್ತು ಅಮೆರಿಕಗಳ ನಡುವಿನ ಉದ್ವಿಗ್ನತೆ ಹೆಚ್ಚಿರುವಂತೆಯೇ, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್‌ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಮಂಗಳವಾರ ಹೇಳಿದ್ದಾರೆ.

‘‘ಇರಾನ್ ದೇಶದ ವಿರುದ್ಧ ‘ಗರಿಷ್ಠ ಒತ್ತಡ’ ಹೇರುವ ನೀತಿಯಿಂದ ಯಾವುದೇ ಪ್ರಯೋಜನವಿಲ್ಲ ಹಾಗೂ ಅಮೆರಿಕದೊಂದಿಗೆ ಯಾವುದೇ ಮಟ್ಟದಲ್ಲಿ ಮಾತುಕತೆಗಳು ನಡೆಯುವುದಿಲ್ಲ ಎಂಬುದಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಎಲ್ಲ ಅಧಿಕಾರಿಗಳು ಸರ್ವಾನುಮತದಿಂದ ಭಾವಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಅಧ್ಯಕ್ಷ ಹಸನ್ ರೂಹಾನಿಯನ್ನು ಭೇಟಿಯಾಗಬಹುದಾಗಿದೆ ಎಂದು ಶ್ವೇತಭವನ ರವಿವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News