ಸಿಂಧ್: ಹಿಂದೂ ಬಾಲಕಿಯ ಮೃತ ದೇಹ ಪತ್ತೆ

Update: 2019-09-17 17:00 GMT

ಇಸ್ಲಾಮಾಬಾದ್, ಸೆ. 17: ಪಾಕಿಸ್ತಾನದ ಸಿಂಧ್ ಪ್ರಾಂತದ ಹಿಂದೂ ಬಾಲಕಿಯೊಬ್ಬರು ಮಂಗಳವಾರ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರೆ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.

ಸಿಂಧ್‌ನ ಘೋಟ್ಕಿ ಪಟ್ಟಣದ ನಿವಾಸಿಯಾಗಿರುವ ನಮೃತಾ ಚಂದಾನಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದರು. ಅವರು ಮಂಚದಲ್ಲಿ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಹಾಗೂ ಅವರ ಕುತ್ತಿಗೆಯ ಸುತ್ತ ಬಟ್ಟೆಯ ತುಂಡೊಂದನ್ನು ಕಟ್ಟಲಾಗಿತ್ತು. ಅವರ ಕೋಣೆಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು.

ಆಕೆಯನ್ನು ಕೊಲೆ ಮಾಡಲಾಗಿದೆ ಎನ್ನುವುದನ್ನು ಪ್ರಾಥಮಿಕ ತನಿಖೆ ತೋರಿಸುತ್ತದೆ ಎಂದು ವೈದ್ಯರೂ ಆಗಿರುವ ನಮೃತಾ ಸಹೋದರ ವಿಶಾಲ್ ಹೇಳಿದ್ದಾರೆ.

‘‘ಅದು ಆತ್ಮಹತ್ಯೆಯಲ್ಲ. ಆತ್ಮಹತ್ಯೆಯ ಗುರುತುಗಳೇ ಬೇರೆ. ಆಕೆಯ ಕುತ್ತಿಗೆಯ ಸುತ್ತ ಕೇಬಲ್‌ನ ಗುರುತುಗಳನ್ನು ನಾನು ನೋಡಿದ್ದೇನೆ. ಅವಳ ಕೈಗಳಲ್ಲಿಯೂ ಗುರುತುಗಳಿವೆ. ಆ ಗುರುತುಗಳು ಕೇಬಲ್‌ನದ್ದು. ಆದರೆ ಅವಳ ಕುತ್ತಿಗೆಯ ಸುತ್ತ ದುಪಟ್ಟ ಇದ್ದುದನ್ನು ನಾನು ನೋಡಿದ್ದೇನೆ’’ ಎಂದು ವಿಶಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News