ಇಂಗ್ಲಿಷ್ ಕಾಲುವೆಯನ್ನು 4 ಬಾರಿ ನಿರಂತರ ಈಜಿದ ಅಮೆರಿಕ ಮಹಿಳೆ

Update: 2019-09-17 18:11 GMT

ಲಂಡನ್, ಸೆ. 17: ಇಂಗ್ಲಿಷ್ ಕಡಲ್ಗಾಲುವೆಯನ್ನು ನಾಲ್ಕು ಬಾರಿ ನಿರಂತರವಾಗಿ (ಒಂದು ಚೂರೂ ನಿಲ್ಲದೆ) ಈಜಿದ ಮೊದಲ ವ್ಯಕ್ತಿಯಾಗಿ ಅಮೆರಿಕದ ಮಹಿಳೆ ಸಾರಾ ಥಾಮಸ್ ದಾಖಲೆ ಪುಸ್ತಕವನ್ನು ಸೇರಿದ್ದಾರೆ.

37 ವರ್ಷದ ಸಾರಾ ತನ್ನ ಅಮೋಘ ಸಾಹಸವನ್ನು ರವಿವಾರ ಮುಂಜಾನೆ ಆರಂಭಿಸಿದರು ಹಾಗೂ 54 ಗಂಟೆಗಳಿಗೂ ಹೆಚ್ಚಿನ ಅವಧಿಯ ಬಳಿಕ ಮಂಗಳವಾರ ಬೆಳಗ್ಗೆ ನಿಲ್ಲಿಸಿದರು ಎಂದು ಬಿಬಿಸಿ ವರದಿ ಮಾಡಿದೆ.

ತನ್ನ ಈ ಸಾಹಸವನ್ನು ಸಾರಾ ಸ್ತನ ಕ್ಯಾನ್ಸರ್‌ನಿಂದ ಬದುಕುಳಿದ ಎಲ್ಲ ಮಹಿಳೆಯರಿಗೆ ಅರ್ಪಿಸಿದ್ದಾರೆ. ಸ್ವತಃ ಸಾರಾ ಸ್ತನ ಕ್ಯಾನ್ಸರ್‌ನಿಂದ ಬಳಲಿದ್ದು, ಒಂದು ವರ್ಷದ ಹಿಂದೆಯಷ್ಟೇ ಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದಾರೆ.

ಅಂತಿಮ ಹಂತದಲ್ಲಿ ಬಲವಾದ ತೆರೆಗಳು ಸಾರಾರನ್ನು ಹಿಂದಕ್ಕೆ ದೂಡಿದವಾದರೂ, ಮಂಗಳವಾರ ಬೆಳಗ್ಗೆ 6:30ಕ್ಕೆ ಅವರು ತನ್ನ ಸಾಹಸವನ್ನು ಮುಕ್ತಾಯಗೊಳಿಸಿದರು.

ಇಲ್ಲಿಯವರೆಗೆ ಕೇವಲ ನಾಲ್ವರು ಈಜುಗಾರರು ಇಂಗ್ಲಿಷ್ ಕಾಲುವೆಯನ್ನು ನಿರಂತರವಾಗಿ ಮೂರು ಬಾರಿ ಈಜಿದ್ದಾರೆ. ಸಾರಾಗಿಂತ ಮೊದಲು, ನಾಲ್ಕನೇ ಹಂತವನ್ನು ಯಾರೂ ಪೂರ್ಣಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News