ಬಜರಂಗ್, ರವಿ ಸೆಮಿ ಫೈನಲ್‌ಗೆ, ಒಲಿಂಪಿಕ್ಸ್ ಗೆ ಅರ್ಹತೆ

Update: 2019-09-19 18:03 GMT

ನೂರ್ ಸುಲ್ತಾನ್(ಕಝಖ್‌ಸ್ತಾನ), ಸೆ.19: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿರುವ ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಹಾಗೂ ಅಚ್ಚರಿ ಫಲಿತಾಂಶ ದಾಖಲಿಸಿದ ರವಿ ದಾಹಿಯಾ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆೆದಿದ್ದಾರೆ. ಆದರೆ, ಬಜರಂಗ್ ಹಾಗೂ ರವಿ ಸೆಮಿ ಫೈನಲ್‌ನಲ್ಲಿ ಸೋಲನುಭವಿಸಿದ್ದು, ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಆಡಲಿದ್ದಾರೆ.

57 ಕೆಜಿ ಸೆಮಿ ಫೈನಲ್‌ನಲ್ಲಿ ರವಿ ರಶ್ಯದ ಝವುರ್ ಉಗುಯೆವ್ ವಿರುದ್ಧ 4-6 ಅಂತರದಿಂದ ಸೋತಿದ್ದಾರೆ. ಬಜರಂಗ್ ಪೂನಿಯಾ 65ಕೆಜಿ ತೂಕ ವಿಭಾಗದ ರೋಚಕ ಸೆಮಿ ಫೈನಲ್ ಪಂದ್ಯದಲ್ಲಿ ಕಝಖ್‌ಸ್ತಾನದ ದೌಲತ್ ನಿಯಾಝ್‌ಬೆಕೊವ್ ವಿರುದ್ಧ 2-9 ಅಂತರದಿಂದ ಶರಣಾದರು. ಇದಕ್ಕೂ ಮೊದಲು ಬಜರಂಗ್ 65 ಕೆಜಿ ವಿಭಾಗದಲ್ಲಿ ತನ್ನ ಸುಲಭ ಎದುರಾಳಿಗಳನ್ನು ಮಣಿಸುತ್ತಾ ಸೆಮಿ ಫೈನಲ್ ತಲುಪಿದರು. ಈ ಮೂಲಕ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದರು. 2018ರಲ್ಲಿ ಬುಡಾಪೆಸ್ಟ್‌ನಲ್ಲಿ ಬಜರಂಗ್ ಬೆಳ್ಳಿ ಪದಕ ಜಯಿಸಿದ್ದರು.

ಡಬಲ್ ಒಲಿಂಪಿಯನ್ ಸುಶೀಲ್ ಕುಮಾರ್ ಮಾತ್ರ 2010ರಲ್ಲಿ ಮಾಸ್ಕೊದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ ಭಾರತದ ಏಕೈಕ ಕುಸ್ತಿಪಟು ಆಗಿದ್ದಾರೆ.

ಬಜರಂಗ್ ಮೊದಲ ಸುತ್ತಿನಲ್ಲಿ ಪೊಲೆಂಡ್‌ನ ಬಿಯೆನ್‌ಕೊವಿಸ್ಕಿ ಅವರನ್ನು 9-2 ಅಂತರದಿಂದ ಮಣಿಸಿದರು. ಎರಡನೇ ಸುತ್ತಿನಲ್ಲಿ ಸ್ಲೋವಾನಿಯದ ಡೇವಿಡ್ ಹಬಟ್‌ರನ್ನು ಸುಲಭವಾಗಿ ಸೋಲಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾದ ಜೊಂಗ್ ಚೊಯ್ ಸನ್‌ರನ್ನು 8-1 ಅಂತರದಿಂದ ಸೋಲಿಸಿದರು.

ರವಿ(57ಕೆಜಿ)ಭಾರತದ ಅನಿರೀಕ್ಷಿತ ಹೀರೋ ಆಗಿ ಹೊರಹೊಮ್ಮಿದರು. ತನ್ನ ಸವಾಲಿನ ತೂಕ ವಿಭಾಗದಲ್ಲಿ ವಿಶ್ವದ ನಂ.3ನೇ ಕುಸ್ತಿಪಟು ಹಾಗೂ ಯುರೋಪಿಯನ್ ಚಾಂಪಿಯನ್‌ಗೆ ಸೋಲುಣಿಸಿದರು. ರವಿ ಮೊದಲೆರಡು ಪಂದ್ಯಗಳನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆದ್ದುಕೊಂಡರು. ಮೊದಲ ಸುತ್ತಿನಲ್ಲಿ ಕೊರಿಯಾದ ಸಂಗ್‌ವಾನ್ ಕಿಮ್‌ರನ್ನು ಸೋಲಿಸಿದರು. ಎರಡನೇ ಸುತ್ತಿನಲ್ಲಿ ಅರ್ಮೆನಿಯದ ಯುರೋಪಿಯನ್ ಚಾಂಪಿಯನ್ ಅರ್ಸೆನ್ ಹರುಟುನಿಯನ್‌ಗೆ ಸೋಲುಣಿಸಿ ಶಾಕ್ ನೀಡಿದರು. ಕ್ವಾರ್ಟರ್ ಫೈನಲ್‌ನಲ್ಲಿ 2017ರ ವಿಶ್ವ ಚಾಂಪಿಯನ್ ಹಾಗೂ ವಿಶ್ವದ ನಂ.3ನೇ ಕುಸ್ತಿಪಟು ಯೂಕಿ ಟಕಹಶಿ ಅವರನ್ನು 6-1 ಅಂತರದಿಂದ ಸೋಲಿಸಿ ದೈತ್ಯ ಸಂಹಾರಿ ಎನಿಸಿಕೊಂಡರು.

ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ ಮಲಿಕ್ ಮಹಿಳೆಯರ ಸ್ಪರ್ಧೆಯಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಸಾಕ್ಷಿ ಮೊದಲ ಸುತ್ತಿನ ಪಂದ್ಯದಲ್ಲಿ ನೈಜೀರಿಯದ ಅಮಿನಾಟ್ ಅಡೆನಿಯಿ ವಿರುದ್ಧ 7-10 ಅಂತರದಿಂದ ಸೋತಿದ್ದಾರೆ. ನೈಜೀರಿಯದ ಕುಸ್ತಿಪಟು ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ಹಿನ್ನೆಲೆಯಲ್ಲಿ ಸಾಕ್ಷಿ ಚಾಂಪಿಯನ್‌ಶಿಪ್‌ನಿಂದ ನಿರ್ಗಮಿಸಿದರು. 68ಕೆಜಿ ತೂಕ ವಿಭಾಗದಲ್ಲಿ ದಿವ್ಯಾ ಕಾಕ್ರನ್ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಜಪಾನ್‌ನ ಸಾರಾ ಡೊಶೊ ವಿರುದ್ಧ 0-2 ಅಂತರದಿಂದ ಸುಲಭವಾಗಿ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News