ಚೀನಾ ಓಪನ್: ಬೇಗನೆ ನಿರ್ಗಮಿಸಿದ ಸಿಂಧು

Update: 2019-09-19 18:05 GMT

ಚಾಂಗ್‌ಝೌ, ಸೆ.19: ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಿಂದ ಬೇಗನೆ ನಿರ್ಗಮಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಥಾಯ್ಲೆಂಡ್‌ನ ಪೋರ್ನ್ ಪಾವೀ ಚೊಚುವಾಂಗ್ ವಿರುದ್ಧ 58 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 21-12, 13-21, 19-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 ಸಿಂಧು ಥಾಯ್ಲೆಂಡ್ ಆಟಗಾರ್ತಿ ವಿರುದ್ಧ ಈತನಕ ಆಡಿದ್ದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಮೊದಲ ಗೇಮ್‌ನ ಆರಂಭದಲ್ಲಿ 7-1 ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಥಾಯ್ ಶಟ್ಲರ್ ಹಿನ್ನಡೆಯನ್ನು 10-11ಕ್ಕೆ ಕಡಿಮೆಗೊಳಿಸಲು ಶಕ್ತರಾದರು. ಮಧ್ಯಂತರದ ಬಳಿಕ ಸತತ 8 ಅಂಕ ಗಳಿಸಿದ ಸಿಂಧು 19-10 ಮುನ್ನಡೆ ಪಡೆದರು. ಅಂತಿಮವಾಗಿ ಮೊದಲ ಗೇಮ್‌ನ್ನು 21-12 ಅಂತರದಿಂದ ಗೆದ್ದುಕೊಂಡರು. ಥಾಯ್ಲೆಂಡ್ ಆಟಗಾರ್ತಿ ಎರಡನೇ ಗೇಮ್‌ನ ಆರಂಭದಲ್ಲೇ 5-1 ಮುನ್ನಡೆ ಸಾಧಿಸಿದರು. ಸತತ 6 ಅಂಕ ಗಳಿಸಿ ತನ್ನ ಮುನ್ನಡೆಯನ್ನು 15-7ಕ್ಕೆ ವಿಸ್ತರಿಸಿದರು. 21-13 ಅಂತರದಿಂದ ಎರಡನೇ ಗೇಮ್‌ನ್ನು ಗೆದ್ದುಕೊಂಡು ಸಮಬಲ ಸಾಧಿಸಿದರು. ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಉಭಯ ಆಟಗಾರ್ತಿಯರು ಕಠಿಣ ಹೋರಾಟ ನಡೆಸಿದರು. ಒಂದು ಹಂತದಲ್ಲಿ 6-6ರಿಂದ ಸಮಬಲ ಸಾಧಿಸಿದರು. ವಿರಾಮದ ವೇಳೆಗೆ ಸಿಂಧು 11-7 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. ಪೊರ್ನ್‌ಪಾವೀ ನಿಧಾನವಾಗಿ ಚೇತರಿಸಿಕೊಂಡು ಆರು ಅಂಕವನ್ನು ಗಳಿಸಿ ಭಾರತದ ವಿಶ್ವ ಚಾಂಪಿಯನ್ ಆಟಗಾರ್ತಿಗೆ ಶಾಕ್ ನೀಡಿದರು.

► ಸಾತ್ವಿಕ್‌ಸಾಯಿರಾಜ್‌ಗೆ ಡಬಲ್ ಸೋಲು: ಡಬಲ್ಸ್ ಸ್ಪೆಷಲಿಸ್ಟ್ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಅವಳಿ ಸೋಲು ಕಂಡರು. ಪುರುಷರ ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ಸೋಲನುಭವಿಸಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ವಿಶ್ವದ 15ನೇ ರ್ಯಾಂಕಿನ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಉತ್ತಮ ಆರಂಭ ಪಡೆದ ಹೊರತಾಗಿಯೂ 33 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಜೋಡಿ ಟಕೆಶಿ ಕಮುರಾ ಹಾಗೂ ಕೆಗೊ ಸೊನೊಡಾ ವಿರುದ್ಧ 19-21, 8-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 ಇದೀಗ ಎರಡನೇ ಬಾರಿ ಸಾತ್ವಿಕ್ ಹಾಗೂ ಚಿರಾಗ್ ಈ ವರ್ಷ ಕಮುರಾ ಹಾಗೂ ಸೊನೊಡಾ ವಿರುದ್ಧ ಸೋತಿದ್ದಾರೆ. ಜುಲೈನಲ್ಲಿ ನಡೆದ ಜಪಾನ್ ಓಪನ್‌ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ವಿಶ್ವದ ನಂ.4ನೇ ಜೋಡಿಗೆ ಸೋಲುಂಡಿತ್ತು.

ಡಬಲ್ಸ್‌ನಲ್ಲಿ ಸೋತ ಬಳಿಕ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೊತೆ ಸ್ಪರ್ಧಾ ಕಣಕ್ಕಿಳಿದ ಸಾತ್ವಿಕ್, ಜಪಾನ್‌ನ ಜೋಡಿ ಯೂಕಿ ಕನೆಕೊ ಹಾಗೂ ಮಿಸಾಕಿ ಮಟ್ಸುಟೊಮೊ ವಿರುದ್ಧ 11-21, 21-16, 12-21 ಗೇಮ್‌ಗಳ ಅಂತರದಿಂದ ಸೋಲುಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News