ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಗುಟೆರಸ್‌ರಿಂದ ಕಾಶ್ಮೀರ ವಿಷಯ ಪ್ರಸ್ತಾವ ಸಾಧ್ಯತೆ: ವಕ್ತಾರ

Update: 2019-09-20 17:04 GMT

ವಿಶ್ವಸಂಸ್ಥೆ, ಸೆ. 20: ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಅವರ ವಕ್ತಾರರು ಹೇಳಿದ್ದಾರೆ.

ಮಾತುಕತೆಯೇ ವಿವಾದವನ್ನು ಪರಿಹರಿಸುವ ಏಕೈಕ ಮಾರ್ಗ ಎಂಬುದಾಗಿ ಅವರು ಈ ಸಂದರ್ಭದಲ್ಲಿ ಮನವರಿಕೆ ಮಾಡಲಿದ್ದಾರೆ ಹಾಗೂ ಕಾಶ್ಮೀರದ ಪ್ರಸಕ್ತ ಬಿಕ್ಕಟ್ಟಿನ ಪರಿಹಾರದ ಭಾಗವಾಗಿ, ಮಾನವಹಕ್ಕು ವಿಷಯಗಳಿಗೆ ಕೂಡ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎನ್ನುವುದಕ್ಕೆ ಒತ್ತುನೀಡಲಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜರಿಕ್ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘‘ಕಾಶ್ಮೀರದ ಬಗ್ಗೆ, ಆ ವಿಷಯ ಪರಿಶೀಲನೆಯಲ್ಲಿದೆ ಎಂಬುದಾಗಿ ಮಹಾಕಾರ್ಯದರ್ಶಿ ಈ ಹಿಂದೆ ಹೇಳಿದ್ದಾರೆ. ಮುಂಬರುವ ವಿಶ್ವಸಂಸ್ಥೆ ಅಧಿವೇಶನದಲ್ಲೂ ಅವರು ಆ ವಿಷಯವನ್ನು ಪ್ರಸ್ತಾಪಿಸುತ್ತಾರೆ ಎಂದು ನನಗನಿಸುತ್ತದೆ’’ ಎಂದು ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನುಡಿದರು.

ಕಾಶ್ಮೀರ ವಿಷಯದಲ್ಲಿ ಪರಿಹಾರವೊಂದಕ್ಕೆ ತಲುಪಲು ಭಾರತ ಮತ್ತು ಪಾಕಿಸ್ತಾನಗಳು ಮಾತುಕತೆ ನಡೆಸುವುದು ಅತ್ಯಂತ ಅಗತ್ಯ ಎಂಬುದಾಗಿ ಗುಟೆರಸ್ ಬುಧವಾರ ಹೇಳಿದ್ದರು. ಉಭಯ ಪಕ್ಷಗಳು ನನ್ನ ಸಲಹೆಯನ್ನು ಬಯಸಿದರೆ, ನೀಡಲು ಸಿದ್ಧನಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದರು. ಮಾನವಹಕ್ಕುಗಳಿಗೆ ಸಂಪೂರ್ಣ ಗೌರವ ನೀಡುವಂತೆಯೂ ಅವರು ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News