ಪರಿಸರ ವಿಪತ್ತನ್ನು ನಿಲ್ಲಿಸಿ: ಜಾಗತಿಕ ನಾಯಕರನ್ನು ಒತ್ತಾಯಿಸಲು ವಿದ್ಯಾರ್ಥಿಗಳಿಂದ ಜಾಗತಿಕ ಧರಣಿ

Update: 2019-09-20 17:12 GMT

ಸಿಡ್ನಿ/ಬ್ಯಾಂಕಾಕ್, ಸೆ. 20: ಪರಿಸರ ವಿಪತ್ತನ್ನು ನಿಲ್ಲಿಸಿ ಎಂಬುದಾಗಿ ವಿಶ್ವಸಂಸ್ಥೆಯ ಪರಿಸರ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಜಾಗತಿಕ ನಾಯಕರನ್ನು ಒತ್ತಾಯಿಸುವುದಕ್ಕಾಗಿ ಆಸ್ಟ್ರೇಲಿಯ ಮತ್ತು ಇತರ ಏಶ್ಯ-ಪೆಸಿಫಿಕ್ ದೇಶಗಳ ಸಾವಿರಾರು ವಿದ್ಯಾರ್ಥಿಗಳು ಶುಕ್ರವಾರ ರಸ್ತೆಗಿಳಿದು ಧರಣಿ ನಡೆಸಿದರು.

ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಸೆಪ್ಟಂಬರ್ 23 ಸೋಮವಾರ ವಿಶ್ವಸಂಸ್ಥೆಯ ಪರಿಸರ ಶೃಂಗಸಭೆ ನಡೆಯಲಿದೆ.

ಆ್ಯಲಿಸ್ ಸ್ಪ್ರಿಂಗ್ಸ್ ಮುಂತಾದ ಪಟ್ಟಣಗಳು ಸೇರಿದಂತೆ ಆಸ್ಟ್ರೇಲಿಯದಾದ್ಯಂತ ಬೃಹತ್ ಪ್ರದರ್ಶನಗಳು ನಡೆದಿವೆ.

‘‘ಸಾಗರಗಳ ಮಟ್ಟ ಏರುತ್ತಿದೆ... ನಾವೂ ಎತ್ತರದ ಪ್ರದೇಶಗಳಿಗೆ ಹೋಗಬೇಕಾಗಿದೆ’’ ಎಂಬ ಫಲಕಗಳನ್ನು ವಿದ್ಯಾರ್ಥಿಗಳು ಮೆಲ್ಬರ್ನ್‌ನಲ್ಲಿ ಪ್ರದರ್ಶಿಸಿದರು.

 ಸ್ವೀಡನ್‌ನ 16 ವರ್ಷದ ಪರಿಸರ ಕಾರ್ಯಕರ್ತೆ ಗ್ರೆಟಾ ತನ್‌ಬರ್ಗ್ ಅವರ ಪ್ರಭಾವದಿಂದಾಗಿ ಶುಕ್ರವಾರ ಸುಮಾರು 150 ದೇಶಗಳಲ್ಲಿ ಪರಿಸರ ಪರ ಪ್ರತಿಭಟನೆಗಳು ನಡೆದಿವೆ. ನಮ್ಮ ಗ್ರಹದ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ನಿಶ್ಚಿತ ಬದಲಾವಣೆಗಳ ಬಗ್ಗೆ ವಿಶ್ವದಾದ್ಯಂತ ವಿದ್ಯಾರ್ಥಿಗಲು ಮತ್ತು ಇತರರು ಒಂದೇ ಧ್ವನಿಯಲ್ಲಿ ಮಾತನಾಡಲು ಅವಕಾಶ ನೀಡುವುದು ಈ ಧರಣಿಗಳ ಉದ್ದೇಶವಾಗಿದೆ.

ವಿಶ್ವಾದ್ಯಂತ 5,000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಶುಕ್ರವಾರ ಆಯೋಜಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆಯುವ ಬೃಹತ್ ಸಭೆಯೊಂದಿಗೆ ಶುಕ್ರವಾರದ ಜಾಗತಿಕ ಧರಣಿ ಮುಕ್ತಾಯಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News