ಹ್ಯೂಸ್ಟನ್ ಫೆಡರಲ್ ನ್ಯಾಯಾಲಯದಲ್ಲಿ ಮೋದಿ ವಿರುದ್ಧ ಮೊಕದ್ದಮೆ

Update: 2019-09-20 17:34 GMT

ಹ್ಯೂಸ್ಟನ್ (ಅಮೆರಿಕ), ಸೆ. 20: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಪಡಿಸಿರುವುದಕ್ಕೆ ಸಂಬಂಧಿಸಿ ಇಬ್ಬರು ಕಾಶ್ಮೀರಿ ನಾಗರಿಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಮೆರಿಕದ ಹ್ಯೂಸ್ಟನ್ ನಗರದ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆಯೊಂದನ್ನು ದಾಖಲಿಸಿದ್ದಾರೆ.

ಇದೇ ನಗರದಲ್ಲಿ ರವಿವಾರ ಪ್ರಧಾನಿ ಮೋದಿ ಬೃಹತ್ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಹಾಗೂ ಆ ಕಾರ್ಯಕ್ರಮಕ್ಕೆ ‘ಹೌಡೀ ಮೋದಿ’ ಎಂಬ ಹೆಸರಿಡಲಾಗಿದೆ.

‘‘ನಮ್ಮ ತಾಯ್ನಾಡನ್ನು ಅವರು ಆಗಸ್ಟ್ 5ರಂದು ಏಕಪಕ್ಷೀಯವಾಗಿ ವಶಪಡಿಸಿಕೊಂಡ ಬಳಿಕ, ಅಲ್ಲಿ ನಮ್ಮ ಪ್ರೀತಿ ಪಾತ್ರರ ಬಂಧನ, ನಾಪತ್ತೆ ಮತ್ತು ಸಾವುಗಳು ಸಂಭವಿಸುತ್ತಿವೆ’’ ಎಂದು ಅವರು ಆರೋಪಿಸಿದ್ದಾರೆ.

‘‘ಮೋದಿ, ಅವರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಮತ್ತು ಭಾರತೀಯ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ಧಿಲ್ಲೋನ್ ನ್ಯಾಯಾಂಗಕ್ಕೆ ಹೊರತಾದ ಹತ್ಯೆಗಳನ್ನು ಮಾಡಿದ್ದಾರೆ, ಮಾನಸಿಕ ತುಮುಲ ಸೃಷ್ಟಿಸಿದ್ದಾರೆ, ಮಾನವತೆಗೆ ವಿರುದ್ಧವಾದ ಅಪರಾಧಗಳನ್ನು ಮಾಡಿದ್ದಾರೆ ಹಾಗೂ ಸೇನಾ ಕಾರ್ಯಾಚರಣೆಗಳ ವೇಳೆ ಕಾಶ್ಮೀರಿಗಳಿಗೆ ಕ್ರೂರ, ಅಮಾನವೀಯ, ಅವಮಾನಕರ ಶಿಕ್ಷೆಗಳನ್ನು ನೀಡಿದ್ದಾರೆ. ಮೋದಿ ಮತ್ತು ಸಹಚರರು ಸಾರ್ವಜನಿಕ ಅಶಾಂತಿಯನ್ನು ಸೃಷ್ಟಿಸಿದ್ದಾರೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮುಸ್ಲಿಮರ ಉದ್ದೇಶಪೂರ್ವಕ, ದುರುದ್ದೇಶದ ಹತ್ಯೆಗಳನ್ನು ತಡೆಯದಿರುವ ಮೂಲಕ ಅವರು ನಿರ್ಲಕ್ಷ ಧೋರಣೆಯನ್ನು ತಾಳಿದ್ದಾರೆ’’ ಎಂದು 73 ಪುಟಗಳ ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News