ರವಿವಾರ ಇಮ್ರಾನ್ ಜೊತೆ, ಮಂಗಳವಾರ ಮೋದಿ ಜೊತೆ ಟ್ರಂಪ್ ಮಾತುಕತೆ
Update: 2019-09-21 21:37 IST
ವಾಶಿಂಗ್ಟನ್, ಸೆ. 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರನ್ನು ಭೇಟಿಯಾಗಲಿದ್ದಾರೆ. ಹಾಗೂ ಅದರ ಒಂದು ದಿನದ ಬಳಿಕ, ಅಂದರೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕೂ ಮೊದಲು, ಹ್ಯೂಸ್ಟನ್‌ನಲ್ಲಿ ರವಿವಾರ ನಡೆಯುವ ‘ಹೌಡೀ ಮೋದಿ’ ಎಂಬ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಟ್ರಂಪ್ ಕೂಡ ಭಾಗವಹಿಸಲಿದ್ದಾರೆ.
ಟ್ರಂಪ್ ಭಾರತ ಮತ್ತು ಪಾಕಿಸ್ತಾನಗಳ ನಾಯಕರಿಬ್ಬರನ್ನೂ ವಿಶ್ವಸಂಸ್ಥೆಯ 74ನೇ ಮಹಾಧಿವೇಶನದ ನೇಪಥ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಭೇಟಿಯಾಗಲಿದ್ದಾರೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ಸುಮಾರು 50,000 ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ರವಿವಾರ ರಾತ್ರಿ ಅಮೆರಿಕ ಅಧ್ಯಕ್ಷರು ನ್ಯೂಯಾರ್ಕ್ ತಲುಪುವರು ಎಂದರು.