ರಸ್ತೆಗಳನ್ನು ತುಂಬಿದ 40 ಲಕ್ಷ ಜನರು

Update: 2019-09-21 16:12 GMT

ನ್ಯೂಯಾರ್ಕ್, ಸೆ. 21: ಜಗತ್ತಿನಾದ್ಯಂತದ ಲಕ್ಷಾಂತರ ವಿದ್ಯಾರ್ಥಿಗಳು ಶುಕ್ರವಾರ ಶಾಲೆಗಳಿಗೆ ಚಕ್ಕರ್ ಹೊಡೆದು ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಧರಣಿಯಲ್ಲಿ ಪಾಲ್ಗೊಂಡರು. ಶನಿವಾರ ನಡೆಯುವ ವಿಶ್ವಸಂಸ್ಥೆಯ ಯುವ ಶೃಂಗ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಪರಿಸರ ಧರಣಿ ನಡೆಯಿತು.

ಯುವ ಶೃಂಗ ಸಮ್ಮೇಳನದಲ್ಲಿ ಹದಿಹರೆಯದ ಪರಿಸರ ಕಾರ್ಯಕರ್ತೆ ಗ್ರೆಟಾ ತನ್‌ ಬರ್ಗ್ ಭಾಗವಹಿಸಲಿದ್ದು, ‘ಇದು ಆರಂಭ ಮಾತ್ರ’ ಎಂದು ಘೋಷಿಸಿದ್ದಾರೆ.

ಜಗತ್ತಿನಾದ್ಯಂತ ಸುಮಾರು 40 ಲಕ್ಷ ಜನರು ರಸ್ತೆಗಳನ್ನು ತುಂಬಿದರು ಎಂದು ಸಂಘಟಕರು ಹೇಳಿದರು. ಭೂಮಿಯ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಭೂಮಿಯ ಅಸ್ತಿತ್ವಕ್ಕೆ ಬೆದರಿಕೆಯೊಡ್ಡುತ್ತಿರುವ ‘ಜಾಗತಿಕ ತಾಪಮಾನ’ದ ವಿರುದ್ಧ ನಡೆದ ಅತಿ ದೊಡ್ಡ ಪ್ರತಿಭಟನೆ ಇದಾಗಿದೆ ಎಂದು ಬಣ್ಣಿಸಲಾಗಿದೆ.

ಧರಣಿಯು ಏಶ್ಯ ಮತ್ತು ಪೆಸಿಫಿಕ್‌ನಲ್ಲಿ ಆರಂಭಗೊಂಡಿತು, ಆಫ್ರಿಕ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಹರಡಿತು ಹಾಗೂ ಅಮೆರಿಕದಲ್ಲಿ ಸಮಾರೋಪಗೊಂಡಿತು. ಅಮೆರಿಕದಲ್ಲಿ ನಡೆದ ಧರಣಿಗಳಲ್ಲಿ ಗ್ರೆಟಾ ತನ್‌ಬರ್ಗ್ ಪಾಲ್ಗೊಂಡರು.

ಬದಲಾವಣೆಯಂತೂ ಬರುತ್ತಿದೆ: ಬಾಲ ಪರಿಸರ ಕಾರ್ಯಕರ್ತೆ ಗ್ರೆಟಾ ಘೋಷಣೆ

‘‘ಅವರಿಗೆ ಇಷ್ಟವಿದೆಯೋ, ಇಲ್ಲವೋ, ಬದಲಾವಣೆಯಂತೂ ಬರುತ್ತಿದೆ’’ ಎಂದು ನ್ಯೂಯಾರ್ಕ್‌ನಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿದ ತನ್‌ಬರ್ಗ್ ಹೇಳಿದರು. ನ್ಯೂಯಾರ್ಕ್‌ನಲ್ಲಿ 2,50,000 ಮಂದಿ ಧರಣಿಯಲ್ಲಿ ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದರು.

ಶುಕ್ರವಾರದ ಧರಣಿಗಳು, ಮುಂದಿನ ವಾರ 163 ದೇಶಗಳಲ್ಲಿ ನಡೆಯಲು ನಿಗದಿಯಾಗಿರುವ 5,800 ಪ್ರತಿಭಟನಾ ಧರಣಿಗಳ ಆರಂಭವಾಗಿದೆ ಎಂದು ಧರಣಿ ಸಂಘಟಕ ‘350.ಆರ್ಗ್’ ಹೇಳಿದೆ.

ಬರ್ಲಿನ್‌ನಿಂದ ಬಾಸ್ಟನ್‌ವರೆಗೆ, ಕಂಪಾಲದಿಂದ ಕಿರಿಬತಿವರೆಗೆ, ಸಿಯೋಲ್‌ನಿಂದ ಸಾವೊಪೌಲೊವರೆಗೆ ಜನರು ‘ಇನ್ನೊಂದು ಭೂಮಿ ಇಲ್ಲ’ ಮತ್ತು ‘ಭೂಮಿಯನ್ನು ಇನ್ನೊಮ್ಮೆ ಶ್ರೇಷ್ಠಗೊಳಿಸಿ’ ಎಂಬ ಬರಹಗಳ ಫಲಕಗಳನ್ನು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News