ಇಸ್ರೇಲ್: ಅರಬ್ ಪಕ್ಷಗಳಿಗೆ ಪ್ರತಿಪಕ್ಷ ನಾಯಕ ಸ್ಥಾನ?

Update: 2019-09-21 17:54 GMT

ಹೈಫಾ, ಸೆ. 21: ಇಸ್ರೇಲ್‌ ನಲ್ಲಿ ಮಂಗಳವಾರ ನಡೆದ ಚುನಾವಣೆಯ ಬಳಿಕ ರಾಷ್ಟ್ರೀಯ ಏಕತಾ ಸರಕಾರವೊಂದು ರಚನೆಯಾದರೆ, ಇಸ್ರೇಲ್‌ನ ಅರಬ್ ಪಕ್ಷಗಳು ಸಂಸತ್ತಿನಲ್ಲಿ ಅತಿ ದೊಡ್ಡ ಆಡಳಿತರಹಿತ ಘಟಕವಾಗುತ್ತವೆ ಹಾಗೂ ಪ್ರತಿಪಕ್ಷದ ನೇತೃತ್ವವನ್ನೂ ವಹಿಸಬಹುದಾಗಿದೆ.

 ಇಸ್ರೇಲ್ ಸಂಸತ್ತು ‘ನೆಸೆಟ್’ನ 120 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅರಬ್ ಪ್ರಾಬಲ್ಯದ ಜಾಯಿಂಟ್ ಲಿಸ್ಟ್ ಮಿತ್ರಕೂಟವು 13 ಸ್ಥಾನಗಳನ್ನು ಪಡೆದಿದೆ. ಈ ಮೂಲಕ ಈ ಮಿತ್ರಕೂಟವು ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಬಲಪಂಥೀಯ ಲಿಕುಡ್ ಪಕ್ಷ (31 ಸ್ಥಾನಗಳು) ಮತ್ತು ಬೆನ್ನಿ ಗಾಂಟ್ಝ್‌ರ ಮಧ್ಯ ಪಂಥೀಯ ಬ್ಲೂ ಆ್ಯಂಡ್ ವೈಟ್ ಪಕ್ಷದ (33 ಸ್ಥಾನಗಳು) ಬಳಿಕ ಮೂರನೇ ಅತಿ ದೊಡ್ಡ ಗುಂಪಾಗಿದೆ.

 ಹಾಗಾಗಿ, ಏಕತಾ ಸರಕಾರವೊಂದು ರೂಪುಗೊಂಡರೆ, ಜಾಯಿಂಟ್ ಲಿಸ್ಟ್ ಸಂಸತ್ತಿನಲ್ಲಿ ಅತಿ ದೊಡ್ಡ ಪ್ರತಿಪಕ್ಷ ಗುಂಪಾಗುತ್ತದೆ.

 ಏಕತಾ ಸರಕಾರವೆಂದರೆ, ಅಸ್ಥಿರತೆಯನ್ನು ನಿವಾರಿಸುವುದಕ್ಕಾಗಿ ಎರಡು ದೊಡ್ಡ ಮಿತ್ರಕೂಟಗಳು ಸೇರಿಕೊಂಡು ಸರಕಾರ ರಚಿಸುವುದು. ಏಕತಾ ಸರಕಾರ ರಚಿಸುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗಾಗಲೇ ಬೆನ್ನಿ ಗಾಂಟ್ಝ್‌ರನ್ನು ಆಹ್ವಾನಿಸಿದ್ದಾರೆ. ಈ ಬಗ್ಗೆ ಗಾಂಟ್ಝ್ ಆರಂಭದಲ್ಲಿ ನಿರಾಸಕ್ತಿಯನ್ನು ವ್ಯಕ್ತಪಡಿಸಿರುವರಾದರೂ, ಅವರಿಗೆ ಬೇರೆ ಆಯ್ಕೆ ಉಳಿದಿಲ್ಲ ಎನ್ನಲಾಗಿದೆ.

ದೇಶದಲ್ಲಿರುವ 21 ಶೇಕಡ ಅರಬ್ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಯಾವುದೇ ಪಕ್ಷವು ಈವರೆಗೆ ಇಸ್ರೇಲ್ ಸರಕಾರದ ಭಾಗವಾಗಿಲ್ಲ. ಆದರೆ, ಜಾಯಿಂಟ್ ಲಿಸ್ಟ್‌ನ ಮುಖ್ಯಸ್ಥ 44 ವರ್ಷದ ಐಮಾನ್ ಉದೀ ಪ್ರತಿಪಕ್ಷ ನಾಯಕರಾದರೆ, ಅವರಿಗೆ ಗುಪ್ತಚರ ಸಂಸ್ಥೆ ಮೊಸಾದ್ ಪ್ರತಿ ತಿಂಗಳು ಮಾಹಿತಿಗಳನ್ನು ಒದಗಿಸುತ್ತದೆ ಹಾಗೂ ದೇಶಕ್ಕೆ ಭೇಟಿ ನೀಡುವ ಬೇರೆ ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡುವ ಅವಕಾಶ ಒದಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News