ಇರಾನ್ ವಿರುದ್ಧ ಹೊಸ ‘ಅತ್ಯಂತ ಕಠಿಣ’ ದಿಗ್ಬಂಧನ ಜಾರಿ

Update: 2019-09-21 17:20 GMT

ವಾಶಿಂಗ್ಟನ್, ಸೆ. 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಇರಾನ್ ವಿರುದ್ಧ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದ್ದಾರೆ. ಇದು ಇನ್ನೊಂದು ದೇಶದ ವಿರುದ್ಧ ವಿಧಿಸಲಾದ ಅತ್ಯಂತ ಕಠಿಣ ಆರ್ಥಿಕ ದಿಗ್ಬಂಧನ ಎಂಬುದಾಗಿ ಟ್ರಂಪ್ ಬಣ್ಣಿಸಿದರು.

ಆದರೆ, ಆ ದೇಶದ ವಿರುದ್ಧ ಸೇನಾ ಕಾರ್ಯಾಚರಣೆ ಬಗ್ಗೆ ನಾನು ಯೋಚಿಸಿಲ್ಲ ಎಂಬ ಇಂಗಿತವನ್ನು ವ್ಯಕ್ತಪಡಿಸಿದ ಅವರು, ಸಂಯಮವು ಶಕ್ತಿಯ ಸೂಚನೆಯಾಗಿದೆ ಎಂದು ಬಣ್ಣಿಸಿದರು.

ಕಳೆದ ವಾರಾಂತ್ಯದಲ್ಲಿ ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಗಳನ್ನು ಇರಾನ್ ನಡೆಸಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ ಬಳಿಕ, ಅಮೆರಿಕ ಖಜಾನೆ ಇಲಾಖೆಯು ಇರಾನ್‌ನ ಕೇಂದ್ರೀಯ ಬ್ಯಾಂಕ್ ವಿರುದ್ಧದ ಕ್ರಮಗಳನ್ನು ಘೋಷಿಸಿದೆ.

‘‘ನಾವು ಈಗಷ್ಟೇ ಇರಾನ್‌ನ ರಾಷ್ಟ್ರೀಯ ಬ್ಯಾಂಕ್‌ನ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿದ್ದೇವೆ’’ ಎಂದು ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು. ‘‘ಇವುಗಳು ದೇಶವೊಂದರ ಮೇಲೆ ಈವರೆಗೆ ವಿಧಿಸಲಾದ ಅತ್ಯಧಿಕ ಪ್ರಮಾಣದ ದಿಗ್ಬಂಧನಗಳಾಗಿವೆ’’ ಎಂದರು.

ಆದರೆ, ನಾನು ಸೇನಾ ಕಾರ್ಯಾಚರಣೆಯ ಬಗ್ಗೆ ಯೋಚಿಸಿಲ್ಲ ಎಂಬ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.

‘‘ನಾನು ಮಾಡಬಹುದಾದ ಅತ್ಯಂತ ಸುಲಭದ ಕೆಲಸವೆಂದರೆ, ಇರಾನ್‌ನಲ್ಲಿರುವ 15 ಪ್ರಮುಖ ನೆಲೆಗಳನ್ನು ನಾಶಗೊಳಿಸುವುದು’’ ಎಂದರು.

‘‘ನಾನು ಅದನ್ನು ಈಗಲೇ ನಿಮ್ಮ ಎದುರಲ್ಲಿ ಮಾಡಬಲ್ಲೆ. ಆಗ ನಿಮಗೆ ವರದಿ ಮಾಡಲು ದೊಡ್ಡ ಸುದ್ದಿಯೊಂದು ಸಿಗುತ್ತದೆ’’ ಎಂದು ಟ್ರಂಪ್ ನುಡಿದರು.

‘‘ಆದರೆ, ಕೊಂಚ ಸಂಯಮ ವಹಿಸುವುದು ನಮ್ಮ ಶಕ್ತಿಯನ್ನು ತೋರಿಸುತ್ತದೆ ಹಾಗೂ ಇದು ಬಲಿಷ್ಠ ವ್ಯಕ್ತಿಗಳ ನೀತಿಯೂ ಆಗಿದೆ’’ ಎಂದು ಅಮೆರಿಕ ಅಧ್ಯಕ್ಷರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News