ಬೈಡನ್ ಪುತ್ರನ ವಿರುದ್ಧ ತನಿಖೆಗಾಗಿ ಯುಕ್ರೇನ್ ಅಧ್ಯಕ್ಷರ ಮೇಲೆ ಟ್ರಂಪ್ ಒತ್ತಡ?

Update: 2019-09-21 17:25 GMT

ವಾಶಿಂಗ್ಟನ್, ಸೆ. 21: ಓರ್ವ ನಿಗೂಢ ವಿಸಲ್‌ಬ್ಲೋಯರ್ (ಮಾಹಿತಿದಾರ), ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಓರ್ವ ವಿದೇಶಿ ನಾಯಕನ ನಡುವಿನ ಟೆಲಿಫೋನ್ ಮಾತುಕತೆ ಮತ್ತು ಯುಕ್ರೇನ್‌ಗೆ ಅಮೆರಿಕದ ಸೇನಾ ನೆರವು- ದೊಡ್ಡದೊಂದು ವಿವಾದವನ್ನು ಸೃಷ್ಟಿಸಿವೆ.

 ಆಗಸ್ಟ್ 12ರಂದು ಅಮೆರಿಕ ಗುಪ್ತಚರ ಸಮುದಾಯದ ಅಜ್ಞಾತ ಅಧಿಕಾರಿಯೊಬ್ಬರು ಇಂಟಲಿಜನ್ಸ್ ಕಮ್ಯುನಿಟಿಯ ಇನ್ಸ್‌ಪೆಕ್ಟರ್ ಜನರಲ್ ಮೈಕಲ್ ಆ್ಯಟ್ಕಿನ್ಸನ್‌ರಿಗೆ ‘ತುರ್ತು ಕಳವಳ’ದ ದೂರೊಂದನ್ನು ಸಲ್ಲಿಸಿದರು.

ದೂರಿನ ಗಂಭೀರತೆಯನ್ನು ಮನಗಂಡ ಆ್ಯಟ್ಕಿನ್ಸನ್ ಆಗಸ್ಟ್ 26ರಂದು ಅದನ್ನು ಟ್ರಂಪ್‌ರಿಂದ ನೇಮಕಗೊಂಡಿರುವ ನ್ಯಾಶನಲ್ ಇಂಟಲಿಜನ್ಸ್‌ನ ಉಸ್ತುವಾರಿ ನಿರ್ದೇಶಕ ಜೋಸೆಫ್ ಮ್ಯಾಗ್ವಯರ್‌ಗೆ ಕಳುಹಿಸಿಕೊಟ್ಟರು.

ಮಾಹಿತಿದಾರನ ದೂರನ್ನು ಕಳುಹಿಸಿಕೊಡುವಂತೆ ಡೆಮಾಕ್ರಟಿಕ್ ನೇತೃತ್ವದ ಹೌಸ್ ಇಂಟಲಿಜನ್ಸ್ ಸಮಿತಿಯು ಒತ್ತಾಯಿಸಿದೆ. ಆದರೆ, ಅದನ್ನು ನೀಡಲು ಮ್ಯಾಗ್ವಯರ್ ನಿರಾಕರಿಸಿದ್ದಾರೆ.

ಯುಕ್ರೇನ್‌ನಲ್ಲಿ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆ ಟ್ರಂಪ್ ಜುಲೈ 25ರಂದು ನಡೆಸಿದ ಮಾತುಕತೆಗೆ ಸಂಬಂಧಿಸಿದ ದೂರು ಅದಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

2020ರ ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ರ ಸಂಭಾವ್ಯ ಎದುರಾಳಿಯಾಗಲಿರುವ ಜೋ ಬೈಡನ್‌ರ ಪುತ್ರ ಹಂಟರ್ ಬೈಡನ್ ಬಗ್ಗೆ ತನಿಖೆ ನಡೆಸುವಂತೆ ಟ್ರಂಪ್ ಝೆಲೆನ್‌ಸ್ಕಿಯನ್ನು ಪದೇ ಪದೇ ಒತ್ತಾಯಿಸಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಹೇಳಿದೆ.

ಯುಕ್ರೇನ್‌ನ ಅನಿಲ ಕಂಪೆನಿ ಬರಿಸ್ಮ ಹೋಲ್ಡಿಂಗ್ಸ್‌ನ ಆಡಳಿತ ಮಂಡಳಿಗೆ ಹಂಟರ್ ಬೈಡನ್ 2014ರಲ್ಲಿ ಸೇರ್ಪಡೆಯಾಗಿದ್ದರು. ಈ ಕಂಪೆನಿಯು ಭ್ರಷ್ಟ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ, ಹಂಟರ್ ಬೈಡನ್ ವಿರುದ್ಧ ವೈಯಕ್ತಿಕವಾಗಿ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ.

ಫೋನ್ ಸಂಭಾಷಣೆಯ ವೇಳೆ, ಯುಕ್ರೇನ್‌ಗೆ ಸೇನಾ ನೆರವಾಗಿ ಅಮೆರಿಕ ಮಂಜೂರು ಮಾಡಿದ್ದ 250 ಮಿಲಿಯ ಡಾಲರ್ (ಸುಮಾರು 1,780 ಕೋಟಿ ರೂಪಾಯಿ) ಮೊತ್ತವನ್ನು ತಡೆಹಿಡಿಯಲಾಗಿತ್ತು.

ಅದೂ ಅಲ್ಲದೆ, ಯುಕ್ರೇನ್ ರಶ್ಯದಿಂದ ಬೆದರಿಕೆಯನ್ನು ಎದುರಿಸುತ್ತಿದೆ. ರಶ್ಯದಿಂದ ರಕ್ಷಣೆ ಅಮೆರಿಕದಿಂದ ಬೇಕಾದರೆ, ಯುಕ್ರೇನ್ ಬೈಡನ್ ಪುತ್ರನ ಬಗ್ಗೆ ತನಿಖೆ ನಡೆಸಬೇಕೆಂದು ಟ್ರಂಪ್ ಪಟ್ಟು ಹಿಡಿದಿದ್ದರು ಎಂದು ಆರೋಪಿಸಲಾಗಿದೆ.

ಸಂಭಾಷಣೆಯ ಮುದ್ರಿತ ಪ್ರತಿ ಬಿಡುಗಡೆಗೊಳಿಸಿ: ಬೈಡನ್ ಒತ್ತಾಯ

ಯುಕ್ರೇನ್ ಅಧ್ಯಕ್ಷರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಟೆಲಿಫೋನ್ ಸಂಭಾಷಣೆಯ ಮುದ್ರಿತ ಪ್ರತಿಯನ್ನು ಬಿಡುಗಡೆಗೊಳಿಸುವಂತೆ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಜೋ ಬೈಡನ್ ಟ್ರಂಪ್‌ರನ್ನು ಒತ್ತಾಯಿಸಿದ್ದಾರೆ.

ಟ್ರಂಪ್ ಮಾಡಿರುವುದು ‘ಸ್ಪಷ್ಟವಾಗಿ ಭ್ರಷ್ಟಾಚಾರವಾಗಿದೆ’ ಎಂದು ಅವರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News