ಭಾರತ-ಅಮೆರಿಕ ಸಂಬಂಧದ ‘ಅತ್ಯಂತ ಮಹತ್ವದ ಕ್ಷಣ’: ನರೇಂದ್ರ ಮೋದಿ ಟ್ವೀಟ್
ನ್ಯೂಯಾರ್ಕ್, ಸೆ. 23: ರವಿವಾರ ಹ್ಯೂಸ್ಟನ್ ನಲ್ಲಿ ನಡೆದ ‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಉಪಸ್ಥಿತಿಯು ಭಾರತ-ಅಮೆರಿಕ ಸಂಬಂಧದಲ್ಲಿ ‘ಅತ್ಯಂತ ಮಹತ್ವದ ಕ್ಷಣ’ವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಸುಮಾರು 50,000 ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಉಭಯ ನಾಯಕರು ಮಾತನಾಡಿದ ಗಂಟೆಗಳ ಬಳಿಕ ಮೋದಿ ಈ ಹೇಳಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ ಮೋದಿ, ಟ್ರಂಪ್ ಭಾರತ ಮತ್ತು ಭಾರತೀಯ ಸಮುದಾಯದ ನಂಬಿಗಸ್ತ ಸ್ನೇಹಿತರಾಗಿದ್ದಾರೆ ಎಂದರು.
‘‘ಕಾರ್ಯಕ್ರಮವು ಚೇತೋಹಾರಿಯಾಗಿತ್ತು. ಅದು ಭಾರತೀಯ ಸಂಸ್ಕೃತಿಯ ಲಕ್ಷಣಗಳು ಮತ್ತು ಭಾರತೀಯ ಸಮುದಾಯದ ಸಾಧನೆಗಳನ್ನು ತೆರೆದಿಟ್ಟಿತು’’ ಎಂದು ತನ್ನ ಟ್ವೀಟ್‌ನಲ್ಲಿ ಮೋದಿ ಹೇಳಿದ್ದಾರೆ.
‘‘ಹ್ಯೂಸ್ಟನ್‌ನ ಕ್ಷಣಗಳು ನನ್ನ ನೆನಪಿನಲ್ಲಿ ಯಾವಾಗಲೂ ಉಳಿಯುತ್ತವೆ’’ ಎಂದುದ ಅಲ್ಲಿನ ಚಿತ್ರಗಳನ್ನು ಟ್ವೀಟ್ ಮಾಡುತ್ತಾ ಮೋದಿ ಹೇಳಿದರು.
► ಅಮೆರಿಕ ಭಾರತವನ್ನು ಪ್ರೀತಿಸುತ್ತದೆ!
ರವಿವಾರ ರಾತ್ರಿ ‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಟ್ವೀಟ್ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ಅವೆುರಿಕ ಭಾರತವನ್ನು ಪ್ರೀತಿಸುತ್ತದೆ’’ ಎಂದು ಹೇಳಿದ್ದಾರೆ.
ಸಮಾರಂಭ ನಡೆದ ಹ್ಯೂಸ್ಟನ್‌ನ ಎನ್‌ಆರ್ ಜಿ ಅರೀನಾದಲ್ಲಿನ ವಾತಾವರಣವು ಮಿಂಚಿನ ಸಂಚಲನ ಉಂಟು ಮಾಡಿತ್ತು ಎಂದು ಅವರು ಬಣ್ಣಿಸಿದ್ದಾರೆ.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿಯನ್ನು ಅಮೆರಿಕದ ‘ಅತ್ಯಂತ ಶ್ರೇಷ್ಠ’ ಮತ್ತು ‘ಅತ್ಯಂತ ನಿಷ್ಠ ಸ್ನೇಹಿತ’ ಎಂಬುದಾಗಿ ಬಣ್ಣಿಸಿದರು. ಪ್ರಧಾನಿ ಭಾರತಕ್ಕಾಗಿ ಅಗಾಧ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಟ್ರಂಪ್ ಹೊಗಳಿದರು.