ಪದಕ ವಿಜೇತರಿಗೆ ಕ್ರೀಡಾ ಸಚಿವರಿಂದ ನಗದು ಪುರಸ್ಕಾರ
ಹೊಸದಿಲ್ಲಿ, ಸೆ.24: ಕಝಖ್‌ಸ್ತಾನದ ನೂರ್ ಸುಲ್ತಾನ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತೀಯ ಕುಸ್ತಿಪಟುಗಳಿಗೆ ಮಂಗಳವಾರ ಕ್ರೀಡಾ ಸಚಿವ ಕಿರಣ್ ರಿಜಿಜು ನಗದು ಪುರಸ್ಕಾರ ನೀಡಿ ಗೌರವಿಸಿದರು.
ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಜಯಿಸಿರುವ ಭಾರತದ ಕುಸ್ತಿಪಟುಗಳು 2013ರಲ್ಲಿ ನೀಡಿದ್ದ ಪ್ರದರ್ಶನವನ್ನು ಉತ್ತಮಪಡಿಸಿಕೊಂಡರು. ಆರು ವರ್ಷಗಳ ಹಿಂದೆ ಭಾರತ 1 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿತ್ತು.
ಪುರುಷರ 86 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದ ದೀಪಕ್ ಪೂನಿಯಾಗೆ 7 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಕಂಚು ಪದಕ ವಿಜೇತರಾದ ಬಜರಂಗ್ ಪೂನಿಯಾ(ಪುರುಷರ 65ಕೆಜಿ ಫ್ರೀಸ್ಟೈಲ್), ವಿನೇಶ್ ಪೋಗಟ್(ಮಹಿಳೆಯರ 53 ಕೆಜಿ), ರಾಹುಲ್ ಅವಾರೆ(ಪುರುಷರ 61 ಕೆಜಿ) ಹಾಗೂ ರವಿ ದಾಹಿಯಾ(ಪುರುಷರ 57 ಕೆಜಿ)ಅವರಿಗೆ ತಲಾ 4 ಲಕ್ಷ ರೂ. ಬಹುಮಾನ ನೀಡಲಾಯಿತು.
ಐವರು ಪದಕ ವಿಜೇತರುಗಳ ಪೈಕಿ ದೀಪಕ್, ಬಜರಂಗ್, ವಿನೇಶ್ ಹಾಗೂ ರವಿ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ರಾಹುಲ್ 61 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು. ಆದರೆ ಅವರು ಸ್ಪರ್ಧಿಸಿರುವ ವಿಭಾಗ ಒಲಿಂಪಿಕ್ಸ್ ಇವೆಂಟ್‌ನಲ್ಲಿಲ್ಲ.
ಭಾರತ ಇದೇ ಮೊದಲ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಒಲಿಂಪಿಕ್ಸ್ ಕೋಟಾ ಸ್ಥಾನ ಪಡೆದುಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ಕೇವಲ ಒಂದು ಒಲಿಂಪಿಕ್ಸ್ ಕೋಟಾ ಗಿಟ್ಟಿಸಿಕೊಂಡಿತ್ತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ 18 ಕುಸ್ತಿ ಸ್ಪರ್ಧೆಗಳಿವೆ. ಭಾರತೀಯ ಕುಸ್ತಿಪಟುಗಳಿಗೆ 2020ರ ಮಾರ್ಚ್ ನಲ್ಲಿ ನಡೆಯುವ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಹಾಗೂ ಮುಂದಿನ ವರ್ಷದ ಎಪ್ರಿಲ್‌ನಲ್ಲಿ ವರ್ಲ್ಡ್ ಕ್ವಾಲಿಫಿಕೇಶನ್ ಟೂರ್ನಮೆಂಟ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಅವಕಾಶವಿದೆ.
‘‘ಭಾರತೀಯ ಕುಸ್ತಿ ತಂಡದ ಐತಿಹಾಸಿಕ ಸಾಧನೆಯಿಂದ ನನಗೆ ತುಂಬಾ ಹೆಮ್ಮೆಯಾಗಿದೆ. ಕುಸ್ತಿಪಟುಗಳು ಐದು ಪದಕ ಗೆಲ್ಲುವ ಜೊತೆಗೆ ನಾಲ್ಕು ಒಲಿಂಪಿಕ್ಸ್ ಕೋಟಾವನ್ನು ಪಡೆದುಕೊಂಡು ಸ್ವದೇಶಕ್ಕೆ ವಾಪಸಾಗಿದ್ದಾರೆ. ಬೆಳ್ಳಿ ವಿಜೇತರಿಗೆ 7 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ ತಲಾ 4 ಲಕ್ಷ ರೂ. ಬಹುಮಾನ ನೀಡಿದ್ದೇವೆ’’ಎಂದು ಕ್ರೀಡಾ ಸಚಿವ ರಿಜಿಜು ಹೇಳಿದ್ದಾರೆ.