ಕೆಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್, ಬಿಸಿಸಿಐ ತನಿಖೆ ಚುರುಕು

Update: 2019-09-25 17:22 GMT

 ಬೆಂಗಳೂರು, ಸೆ.25: ದುಬೈ ಮೂಲದ ಬುಕ್ಕಿಯೊಂದಿಗೆ ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಕರನ್ನು ಬಂಧಿಸಿದ ಬಳಿಕ ಭಾರತದ ಕ್ರಿಕೆಟ್ ಮಂಡಳಿಯು ಪ್ರಾದೇಶಿಕ ಲೀಗ್‌ಗಳ ಕಡೆಗೂ ಮ್ಯಾಚ್ ಫಿಕ್ಸಿಂಗ್ ತನಿಖೆಯನ್ನು ವಿಸ್ತರಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕರ್ನಾಟಕ ಪ್ರೀಮಿಯರ್ ಲೀಗ್ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಕ ಅಶ್ಫಾಕ್ ಅಲಿ ಥಾರಾ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ದುಬೈ ಟಿ-10 ಲೀಗ್‌ನಲ್ಲಿ ತಂಡವನ್ನು ಹೊಂದಿರುವ ಥಾರಾ ದುಬೈ ಬುಕ್ಕಿಯೊಂದಿಗೆ ಬೆಟ್ಟಿಂಗ್‌ನಲ್ಲಿ ನಡೆಸಿದ್ದಾರೆಂಬ ಆರೋಪದಲ್ಲಿ ತನಿಖೆ ಮುಂದುವರಿದೆ. ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾತ್ರದ ಬಗ್ಗೆಯೂ ಪ್ರಶ್ನಿಸಲಾಗುತ್ತಿದೆ.

 ಬೆಟ್ಟಿಂಗ್ ನಡೆಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಮತ್ತು ಅವರು ಇತರ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

  ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್ ವೇಳೆ ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್‌ಗೆ ಆಟಗಾರರನ್ನು ಸಂಪರ್ಕಿಸಿದ್ದಾರೆಂಬ ಗುಮಾನಿಯ ಬಗ್ಗೆ ತನಿಖೆ ಆರಂಭಗೊಂಡ ಬೆನ್ನಲ್ಲೇ ಕೆಪಿಎಲ್‌ನಲ್ಲೂ ಫಿಕ್ಸಿಂಗ್ ಕರಾಳ ಛಾಯೆ ಅನಾವರಣಗೊಂಡಿದೆ. ಭಾರತೀಯ ಮಹಿಳಾ ತಂಡದ ಸದಸ್ಯೆಯನ್ನೂ ಬುಕ್ಕಿಯೊಬ್ಬನು ಸಂಪರ್ಕಿಸಿದ್ದು, ಇಬ್ಬರು ಶಂಕಿತರನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಲಾಗಿದೆ.

  ಮಾಜಿ ಪೊಲೀಸ್ ಮಹಾನಿರ್ದೇಶಕ ಅಜಿತ್ ಸಿಂಗ್ ಈಗ ರಾಜ್ಯಮಟ್ಟದ ಲೀಗ್‌ಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದ್ದಾರೆ

    ಲಾಟರಿ ಅಥವಾ ಕುದುರೆ ರೇಸ್‌ನ್ನು ಹೊರತುಪಡಿಸಿ ಭಾರತದಲ್ಲಿ ಜೂಜಾಟ ಕಾನೂನುಬಾಹಿರವಾಗಿದೆ. ಕ್ರಿಕೆಟ್‌ನ ಎಲ್ಲಾ ಅಂಶಗಳ ಮೇಲೆ ದೇಶ ಮತ್ತು ವಿದೇಶಗಳಲ್ಲಿ ಬುಕ್ಕಿಗಳು ನಾನಾ ರೀತಿಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದಾರೆ. ಫಲಿತಾಂಶದಿಂದ ಹಿಡಿದು ನಿರ್ದಿಷ್ಟ ಓವರ್‌ನಲ್ಲಿ ಎಷ್ಟು ರನ್ ಬರುತ್ತದೆ ಎಂಬ ರೀತಿಯಲ್ಲೂ ಫಿಕ್ಸಿಂಗ್ ನಡೆಯುತ್ತಿದೆ. ಕ್ರಿಕೆಟ್ ಸೇರಿದಂತೆ ಭಾರತೀಯ ಕ್ರೀಡೆಯಲ್ಲಿ ಕಾಲಿಡುತ್ತಿರುವ ಆನ್‌ಲೈನ್ ಬೆಟ್ಟಿಂಗ್‌ನ್ನು ನಿಲ್ಲಿಸಲು ಯಾವುದೇ ಕಾನೂನು ಇಲ್ಲ.

 ವಿಶ್ವದ ಶ್ರೀಮಂತ ರಾಷ್ಟ್ರೀಯ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 2013 ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿತ್ತು. ಇದರ ಪರಿಣಾಮವಾಗಿ ಎರಡು ತಂಡಗಳಿಗೆ ಎರಡು ವರ್ಷಗಳ ನಿಷೇಧ ಹೇರಲಾಯಿತು.

 ಪಾಕಿಸ್ತಾನ ಸೂಪರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ದುಬೈ ಲೀಗ್ ಸೇರಿದಂತೆ ಅನೇಕ ಟ್ವೆಂಟಿ -20 ಲೀಗ್‌ಗಳಲ್ಲಿ ಫಿಕ್ಸಿಂಗ್ ಹಗರಣ ಸ್ಫೋಟಗೊಂಡಿದೆ. ಇದು ಆಟಗಾರರ ಮೇಲೆ ನಿಷೇಧಕ್ಕೆ ಕಾರಣವಾಯಿತು. ಬಿಸಿಸಿಐ ಪ್ರಾದೇಶಿಕ ಲೀಗ್‌ಗಳಲ್ಲಿ ಮ್ಯಾಚ್ ಫಿಕ್ಸಿಂಗ್‌ನ ಕರಾಳ ರೂಪವನ್ನು ತಡೆಗಟ್ಟಲು ಬಿಸಿಸಿಐ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಜೊತೆ ಕೈ ಜೋಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News