ಆಫ್ರಿಕಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ರೋಚಕ ಜಯ
ಸೂರತ್, ಸೆ.25: ಸ್ಪಿನ್ನರ್ ದೀಪ್ತಿ ಶರ್ಮಾ ತನ್ನ ನಾಲ್ಕು ಓವರ್ ಕೋಟಾದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಲ್ಲದೆ ಮೂರು ಮೇಡನ್ ಓವರ್ ಎಸೆಯುವ ಮೂಲಕ ದಕ್ಷಿಣ ಆಫ್ರಿಕ ವಿರುದ್ಧ ಮಂಗಳವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ 11 ರನ್‌ಗಳ ರೋಚಕ ಜಯ ಸಾಧಿಸಲು ನೆರವಾದರು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮಂದಗತಿಯ ಪಿಚ್‌ನಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡ 43 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. 131 ರನ್ ಸುಲಭ ಸವಾಲು ಪಡೆದಿದ್ದ ದಕ್ಷಿಣ ಆಫ್ರಿಕ ಆಟಗಾರ್ತಿಯರಿಗೆ ಭಾರತದ ಸ್ಪಿನ್ನರ್‌ಗಳು ಸಿಂಹಸ್ವಪ್ನವಾಗಿ ಕಾಡಿದರು. ದ.ಆಫ್ರಿಕಾ ತಂಡ ಒಂದು ಎಸೆತ ಬಾಕಿ ಇರುವಾಗಲೇ 119 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ದೀಪ್ತಿ ಕೇವಲ 8 ರನ್‌ಗೆ ಮೂರು ವಿಕೆಟ್‌ಗಳನ್ನು ಉರುಳಿಸಿದರೆ, ಎಡಗೈ ಸ್ಪಿನ್ನರ್ ರಾಧಾ ಯಾದವ್, ಲೆಗ್-ಬ್ರೇಕ್ ಬೌಲರ್ ಪೂನಮ್ ಯಾದವ್ ಹಾಗೂ ವೇಗದ ಬೌಲರ್ ಶಿಖಾ ಪಾಂಡೆ ತಲಾ 2 ವಿಕೆಟ್‌ಗಳನ್ನು ಉರುಳಿಸಿದರು.
ಡು ಪ್ರೀಝ್ 59 ರನ್ ಗಳಿಸಿ ಭಾರತ ತಂಡದ ವಿರುದ್ಧ ದಿಟ್ಟ ಹೋರಾಟ ನೀಡಿದರು. ದ.ಆಫ್ರಿಕಾ ಒಂದು ಹಂತದಲ್ಲಿ 65 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಡು ಪ್ರೀಝ್ 43 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿ ತಂಡದ ಇನಿಂಗ್ಸ್ ಗೆ ಜೀವ ತುಂಬಿದರು. ಡು ಪ್ರೀಝ್, ಅಯಾಬೊಂಗ್ ಜೊತೆಗೂಡಿ 32 ರನ್ ಜೊತೆಯಾಟ ನಡೆಸಿದರು. ಅಯಾಬೊಂಗ್ ವಿಕೆಟನ್ನು ಕಬಳಿಸಿದ ಮಧ್ಯಮ ವೇಗದ ಬೌಲರ್ ಶಿಖಾ ಪಾಂಡೆ 18ನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದರು. ದೀಪ್ತಿ ಶರ್ಮಾ 19ನೇ ಓವರ್‌ನಲ್ಲಿ ಕೇವಲ 8 ರನ್ ಬಿಟ್ಟುಕೊಟ್ಟರು. ಆಗ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 6 ಎಸೆತಗಳಲ್ಲಿ 18 ರನ್ ಅಗತ್ಯವಿತ್ತು. ಡು ಪ್ರೀಝ್ ಎಡಗೈ ಸ್ಪಿನ್ನರ್ ರಾಧಾ ಯಾದವ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಆಫ್ರಿಕಾಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ, ಕೊನೆಯ ಓವರ್‌ನ 4ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆಗ ಪಂದ್ಯ ಭಾರತದ ಪರ ವಾಲಿತು.
- ಸಂಕ್ಷಿಪ್ತ ಸ್ಕೋರ್
► ಭಾರತ ಮಹಿಳಾ ತಂಡ: 20 ಓವರ್‌ಗಳಲ್ಲಿ 130/8
(ಹರ್ಮನ್‌ಪ್ರೀತ್ ಕೌರ್ 43, ಮಂಧಾನ 23, ಇಸ್ಮಾಯೀಲ್ 3-26, ಡಿ ಕ್ಲಾರ್ಕ್ 2-10)
► ದಕ್ಷಿಣ ಆಫ್ರಿಕಾ ಮಹಿಳಾ ತಂಡ: 19.5 ಓವರ್‌ಗಳಲ್ಲಿ 119/10
(ಡು ಪ್ರೀಝ್ 59, ದೀಪ್ತಿ ಶರ್ಮಾ 3/8, ಶಿಖಾ ಪಾಂಡೆ 2-18)