ಇಂದಿನಿಂದ ಆಫ್ರಿಕಾ–ಅಧ್ಯಕ್ಷರ ಇಲೆವೆನ್ ಅಭ್ಯಾಸ ಪಂದ್ಯ
ವಿಜಯನಗರಂ, ಸೆ.25: ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಮಂಡಳಿ ಅಧ್ಯಕ್ಷರ ಇಲೆವೆನ್ ತಂಡಗಳ ನಡುವೆ ಮೂರು ದಿನಗಳ ಅಭ್ಯಾಸ ಪಂದ್ಯ ವಿಝಿಯನಗರಂನಲ್ಲಿ ಗುರುವಾರ ಆರಂಭಗೊಳ್ಳಲಿದೆ.
ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಮುನ್ನಡೆಸಲಿದ್ದಾರೆ.
ರೋಹಿತ್ ಶರ್ಮಾ ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.
ರಾಷ್ಟ್ರೀಯ ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್‌ಮೆಂಟ್ ರೋಹಿತ್ ಅವರನ್ನು ಓಪನರ್ ಆಗಿ ಕಣಕ್ಕಿಳಿಸಲು ನಿರ್ಧರಿಸುವುದರೊಂದಿಗೆ, ಬಹಳ ಸಮಯಗಳ ಬಳಿಕ ಅವರು ಟೆಸ್ಟ್‌ಗೆ ಮರಳಿದ್ದಾರೆ.
ಮಾಯಾಂಕ್ ಅಗರ್ವಾಲ್ ಅವರೊಂದಿಗೆ ರೋಹಿತ್ ಅಭ್ಯಾಸ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ಅಕ್ಟೋಬರ್ 2 ರಿಂದ ವಿಶಾಖ ಪಟ್ಟಣಂನಲ್ಲಿ ಆರಂಭ ವಾಗುವ ಮೊದಲ ಟೆಸ್ಟ್ ಗೆ ತಯಾರಾಗಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಈ ವರೆಗೆ 27 ಟೆಸ್ಟ್ ಪಂದ್ಯಗಳಲ್ಲಿ 39.62 ಸರಾಸರಿಯಂತೆ 1,585 ರನ್, ಮೂರು ಶತಕಗಳನ್ನು ದಾಖಲಿಸಿದ್ದಾರೆ. 2018 ಡಿಸೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.
ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ವೆಸ್ಟ್ ಇಂಡೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಭದ್ರಪಡಿಸಿದ್ದಾರೆ. ರೋಹಿತ್ ಶರ್ಮಾಗೆ ಆರಂಭಿಕ ದಾಂಡಿಗನಾಗಿ ಇನಿಂಗ್ಸ್ ಆರಂಭಿಸಬೇಕಾದ ಸವಾಲು ಎದುರಾಗಿದೆ.
ಅಧ್ಯಕ್ಷರ ಇಲೆವೆನ್ ತಂಡ ಕಾಗಿಸೊ ರಬಾಡ, ವೆರ್ನಾನ್ ಫಿಲ್ಯಾಂಡರ್ ಮತ್ತು ಲುಂಗಿ ಗಿಡಿ ಒಳಗೊಂಡ ವೇಗದ ದಾಳಿಯನ್ನು ಎದುರಿಸಬೇಕಾಗಿದೆ. ದಕ್ಷಿಣ ಆಫ್ರಿಕಾದ ದಾಳಿಯ ವಿರುದ್ಧ ಮೂರು ದಿನಗಳ ಪಂದ್ಯವು ವಿಶಾಖಪಟ್ಟಣದಲ್ಲಿ ನಡೆಯುವ ಆರಂಭಿಕ ಪಂದ್ಯಕ್ಕೂ ಮೊದಲು ಅಭ್ಯಾಸ ನಡೆಸಲು ಸಹಾಯಕ ವಾಗಲಿದೆ. ಶುಭಮನ್ ಗಿಲ್, ಅಭಿಮನ್ಯು ಈಶ್ವರನ್ ಮತ್ತು ಪ್ರಿಯಾಂಕ್ ಪಾಂಚಾಲ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದಲ್ಲಿದ್ದಾರೆ.
ಗಾಯಗೊಂಡ ಜಸ್‌ಪ್ರೀತ್ ಬುಮ್ರಾ ಅವರ ಬದಲಿಯಾಗಿ ಟೆಸ್ಟ್ ತಂಡಕ್ಕೆ ಉಮೇಶ್ ಯಾದವ್‌ರನ್ನು ಸೇರಿಸಿಕೊಳ್ಳಲಾಗಿದೆ.
► ಮಂಡಳಿ ಅಧ್ಯಕ್ಷರ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಮಾಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ಎ.ಆರ್.ಈಶ್ವರನ್, ಕರುಣ್ ನಾಯರ್, ಸಿದ್ಧೇಶ್ ಲಾಡ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ಧರ್ಮೇಂದ್ರಸಿಂಹ ಜಡೇಜಾ, ಅವೇಶ್ ಖಾನ್, ಇಶಾನ್ ಪೊರೆಲ್, ಶಾರ್ದೂಲ್ ಠಾಕೂರ್
► ದಕ್ಷಿಣ ಆಫ್ರಿಕಾ: ಎಫ್ ಡು ಪ್ಲೆಸಿಸ್ (ನಾಯಕ ), ಟೆಂಬಾ ಬವುಮಾ (ಉಪನಾಯಕ), ಥ್ಯೂನಿಸ್ ಡಿ ಬ್ರೂಯಿನ್, ಕ್ವಿಂಟನ್ ಡಿ ಕಾಕ್,ಡೀನ್ ಎಲ್ಗರ್, ಜುಬೇರ್ ಹಂಝಾ, ಕೇಶವ ಮಹಾರಾಜ್, ಐಡೆನ್ ಮಾರ್ಕ್ರಮ್, ಸೆನುರಾನ್ ಮುತ್ತುಸಾಮಿ, ಲುಂಗಿ ಗಿಡಿ, ಅನ್ರಿಕ್ ನಾರ್ಟ್ಜೆ, ವೆರ್ನಾನ್ ಫಿಲ್ಯಾಂಡರ್, ಡೇನ್ ಪೀಡ್ , ಕಾಗಿಸೊ ರಬಾಡ, ರೂಡಿ ಸೆಕೆಂಡ್.