×
Ad

10 ವರ್ಷಗಳ ಬಳಿಕ ಮೊದಲ ಏಕದಿನ ಪಂದ್ಯಕ್ಕೆ ಕರಾಚಿ ಸಜ್ಜು

Update: 2019-09-26 22:25 IST

ಕರಾಚಿ, ಸೆ.26: ಕರಾಚಿ ನಗರ 10 ವರ್ಷಗಳ ಬಳಿಕ ಮೊದಲ ಬಾರಿ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದ ಆತಿಥ್ಯವಹಿಸಿಕೊಂಡಿದ್ದು, ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾವನ್ನು ಎದುರಿಸಲಿದೆ. ಉಭಯ ತಂಡಗಳು ಸೆಣಸಾಡುವುದರೊಂದಿಗೆ ಪಾಕ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮತ್ತೆ ಆರಂಭವಾಗಲಿದೆ.

‘‘ಕರಾಚಿ ಮೊದಲ ಏಕದಿನ ಪಂದ್ಯದ ಆತಿಥ್ಯವಹಿಸಿಕೊಳ್ಳುವ ಮೂಲಕ ಶುಕ್ರವಾರ ಇತಿಹಾಸ ನಿರ್ಮಾಣವಾಗಲಿದೆ. ನಮ್ಮ ದೇಶಕ್ಕೆ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕಾಗಿದೆ’’ ಎಂದು ಪಾಕಿಸ್ತಾನದ ನಾಯಕ ಸರ್ಫರಾಝ್ ಅಹ್ಮದ್ ಹೇಳಿದ್ದಾರೆ.

 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್‌ನ ಮೇಲೆ ಉಗ್ರರ ದಾಳಿಯ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ತಂಡಗಳು ಪಾಕ್‌ಗೆ ತೆರಳಲು ಹಿಂದೇಟು ಹಾಕಲಾರಂಭಿಸಿದವು. ಹೀಗಾಗಿ ಪಾಕ್ ತಂಡ ತವರಿನಲ್ಲಿ ಆಡಬೇಕಾಗಿದ್ದ ತನ್ನೆಲ್ಲಾ ಪಂದ್ಯಗಳನ್ನು ಯುಎಇಯಲ್ಲಿ ಆಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಝಿಂಬಾಬ್ವೆ 2015ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಮೊದಲ ವಿದೇಶಿ ತಂಡವಾಗಿತ್ತು.

ಆ ಬಳಿಕ 2017ರಲ್ಲಿ ವಿಶ್ವ ಇಲೆವೆನ್ ತಂಡ ಟ್ವೆಂಟಿ-20 ಸರಣಿಯನ್ನು ಆಡಿತ್ತು. ಅದೇ ವರ್ಷ ಶ್ರೀಲಂಕಾ ವಿರುದ್ಧ ಏಕೈಕ ಟ್ವೆಂಟಿ-20 ಪಂದ್ಯ ನಡೆದಿತ್ತು. 2018ರಲ್ಲಿ ಕರಾಚಿಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿ ನಡೆದಿತ್ತು.

ಇದೀಗ ಪಾಕ್ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡ ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನಾಡಲಿದೆ. ಭದ್ರತೆಯ ಭೀತಿಯನ್ನು ಮುಂದಿಟ್ಟು ಕೊಂಡು ಶ್ರೀಲಂಕಾದ 10 ಹಿರಿಯ ಆಟಗಾರರು ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಪಾಕ್ ಸೇನೆಯು ಎಲ್ಲ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದು, ತಂಡದ ಹೊಟೇಲ್ ಹಾಗೂ ಮೈದಾನದಲ್ಲಿ 2,000 ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಲಿದ್ದಾರೆ.

ಮೂರು ಏಕದಿನ ಪಂದ್ಯಗಳು ಕರಾಚಿಯಲ್ಲಿ ನಡೆಯಲಿವೆ. ಮೊದಲ ಪಂದ್ಯ ಶುಕ್ರವಾರ ನಡೆದರೆ, ಉಳಿದೆರಡು ಪಂದ್ಯಗಳು ರವಿವಾರ ಹಾಗೂ ಬುಧವಾರ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News