×
Ad

ಶುಕ್ರವಾರದಿಂದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್

Update: 2019-09-26 22:47 IST

 ದೋಹಾ, ಸೆ.26: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಶುಕ್ರವಾರ ಆರಂಭವಾಗಲಿದ್ದು, ಗಾಯಗೊಂಡಿರುವ ಇಬ್ಬರು ಸ್ಟಾರ್ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ ಹಾಗೂ ಹಿಮಾ ದಾಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತದ ಮೇಲೆ ಹೆಚ್ಚಿನ ನಿರೀಕ್ಷೆಯಿಲ್ಲ.

ವಿಶ್ವ ದರ್ಜೆಯ ಜಾವೆಲಿನ್ ಎಸೆತಗಾರ ಚೋಪ್ರಾ ಸೆ.27ರಿಂದ ಅಕ್ಟೋಬರ್ 6ರ ತನಕ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿಲ್ಲ. ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಚೋಪ್ರಾ ಮೇ ತಿಂಗಳಿನಿಂದ ತರಬೇತಿ ನಡೆಸುತ್ತಿದ್ದಾರೆ. ಭಾರತದ ಇನ್ನೋರ್ವ ಪದಕದ ಭರವಸೆಯಾಗಿದ್ದ ಹಿಮಾದಾಸ್ ಯುರೋಪ್‌ನಲ್ಲಿ ನಾಲ್ಕು ತಿಂಗಳ ಕಾಲ ತರಬೇತಿ ಪಡೆದಿದ್ದರು. ಬೆನ್ನುನೋವಿನಿಂದಾಗಿ ಟೂರ್ನಿಯಿಂದ ಹೊರಗುಳಿದಿರುವ ಅವರು ಕೆಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಭಾರತದ ಯಾವ ಅಥ್ಲೀಟ್ ಫೈನಲ್ ತಲುಪಲಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಭಾರತದ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ಪುರುಷರ 4x

400 ಮೀ. ರಿಲೇ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದೆ. 2017ರಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದವಿಂದರ್ ಸಿಂಗ್(ಪುರುಷರ ಜಾವೆಲಿನ್) ಮಾತ್ರ ಫೈನಲ್ ತಲುಪಿದ್ದರು. ರೇಸ್‌ವಾಕರ್‌ಗಳು ಹಾಗೂ ಮ್ಯಾರಥಾನ್ ಓಟಗಾರರು ನಿರಾಶಾದಾಯಕ ಪ್ರದರ್ಶನ ನೀಡಿದ್ದರು. 27 ಸದಸ್ಯರನ್ನು ಒಳಗೊಂಡ ಭಾರತ ತಂಡದಲ್ಲಿ 13 ಅಥ್ಲೀಟ್‌ಗಳು ರಿಲೇಯಲ್ಲಿದ್ದಾರೆ. ಧರುಣ್ ಅಯ್ಯಸ್ವಾಮಿ ವೈಯಕ್ತಿಕ 400 ಮೀ. ಹರ್ಡಲ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ದಾಖಲೆ ವೀರ ಮುಹಮ್ಮದ್ ಅನಸ್ ವೈಯಕ್ತಿಕ 400 ಮೀ. ಓಟದಲ್ಲಿ ಸ್ಪರ್ಧೆಯುವ ಅರ್ಹತೆ ಹೊಂದಿದ್ದರೂ ಕಣಕ್ಕಿಳಿಯುತ್ತಿಲ್ಲ. ಅನಸ್ ಪುರುಷರ 4x

400 ಮೀ. ರಿಲೇ ತಂಡದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ರಿಲೇಗಳಲ್ಲಿ ಅಗ್ರ-8 ಸ್ಥಾನ ಪಡೆದರೆ 2020ರ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಬಹುದು. ಇದು ಭಾರತದ ಮುಂದಿರುವ ಪ್ರಮುಖ ಗುರಿಯಾಗಿದೆ.

ಯುವ ಲಾಂಗ್‌ಜಂಪ್‌ಪಟು ಎಂ.ಶ್ರೀಶಂಕರ್, ದೂರ ಅಂತರದ ಓಟಗಾರ ಜಿನ್ಸನ್ ಜಾನ್ಸನ್ ಹಾಗೂ ಶಾಟ್‌ಪುಟ್ ಪಟು ತೇಜಿಂದರ್ ಸಿಂಗ್ ತೂರ್ ಫೈನಲ್‌ಗೆ ಪ್ರವೇಶಿಸಬೇಕಾದರೆ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಓಟಗಾರ್ತಿ ದ್ಯುತಿ ಚಂದ್ 100 ಮೀ.ನಲ್ಲಿ ಸೆಮಿ ಫೈನಲ್‌ಗೆ ತಲುಪುವ ವಿಶ್ವಾಸ ಇಡಲಾಗಿದೆ.

ಶ್ರೀಶಂಕರ್ ಚಾಂಪಿಯನ್‌ಶಿಪ್‌ನ ಮೊದಲ ದಿನವಾದ ಶುಕ್ರವಾರ ಪುರುಷರ ಲಾಂಗ್‌ಜಂಪ್‌ನ ಅರ್ಹತಾ ಸುತ್ತಿನಲ್ಲಿ ಭಾಗವಹಿಸುವುದರೊಂದಿಗೆ ಭಾರತದ ಅಭಿಯಾನ ಆರಂಭಿಸಲಿದ್ದಾರೆ. ಅಯ್ಯಸ್ವಾಮಿ ಹಾಗೂ ಎಂಪಿ ಜಬೀರ್ ಪುರುಷರ 400 ಮೀ.ಹರ್ಡಲ್ಸ್ ಹೀಟ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News