×
Ad

ಟಿಎನ್‌ಸಿಎ ಅಧ್ಯಕ್ಷೆಯಾಗಿ ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಅವಿರೋಧ ಆಯ್ಕೆ

Update: 2019-09-26 22:54 IST

ಚೆನ್ನೈ, ಸೆ.26: ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಗುರುವಾರ ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ)ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಭಾರತೀಯ ಕ್ರಿಕೆಟ್ ಮಂಡಳಿಯ ರಾಜ್ಯ ಘಟಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. 2013ರ ಐಪಿಎಲ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ ಆಜೀವ ನಿಷೇಧ ಎದುರಿಸುತ್ತಿರುವ ಗುರುನಾಥ್ ಮೈಯ್ಯಪ್ಪನ್ ಪತ್ನಿ ರೂಪಾ ಚೆನ್ನೈನಲ್ಲಿ ಗುರುವಾರ ನಡೆದ ಟಿಎನ್‌ಸಿಎ 87ನೇ ವಾರ್ಷಿಕ ಸಮ್ಮೇಳನದಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾದರು.

ನಾಮಪತ್ರ ಸಲ್ಲಿಕೆಗೆ ಬುಧವಾರ ಸಂಜೆ ತನಕ ಅವಕಾಶವಿತ್ತು. ರೂಪಾ ಟಿಎನ್‌ಸಿಎ ಅಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಏಕೈಕ ಅಭ್ಯರ್ಥಿಯಾಗಿದ್ದರು. ಟಿಎನ್‌ಸಿಎ ನಿಯಮದ ಪ್ರಕಾರ ಚುನಾವಣೆಯನ್ನು ಆಯೋಜಿಸಲಾಗಿತ್ತು.

ರೂಪಾ, ಇಂಡಿಯಾ ಸಿಮೆಂಟ್ಸ್ ಕಂಪೆನಿಯ ಉಪಾಧ್ಯಕ್ಷೆಯಾಗಿದ್ದಾರೆ. ಶ್ರೀನಿವಾಸನ್ ಮಾಲಕತ್ವದ ಇಂಡಿಯಾ ಸಿಮೆಂಟ್ಸ್ ಕಂಪೆನಿಯು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲಕತ್ವ ಹೊಂದಿದೆ.

ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದ ಬಳಿಕ ಟಿಎನ್‌ಸಿಎ ಇತ್ತೀಚೆಗೆ ಮತ್ತೆ ಸುದ್ದಿಯಾಗಿತ್ತು. ಫಿಕ್ಸಿಂಗ್ ಕುರಿತು ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News