×
Ad

ದೀಪಕ್ ಪೂನಿಯಾ ವಿಶ್ವದ ನಂ.1 ಕುಸ್ತಿಪಟು

Update: 2019-09-27 17:54 IST

ಹೊಸದಿಲ್ಲಿ, ಸೆ.27: ಇತ್ತೀಚೆಗೆ ಕಝಖ್‌ಸ್ತಾನದಲ್ಲಿ ಕೊನೆಗೊಂಡ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ದೀಪಕ್ ಪೂನಿಯಾ 86 ಕೆಜಿ ತೂಕ ವಿಭಾಗದಲ್ಲಿ ವಿಶ್ವದ ನಂ.1 ಕುಸ್ತಿಪಟು ಆಗಿ ಹೊರಹೊಮ್ಮಿದರು. ಆದರೆ, ಭಾರತದ ಇನ್ನೋರ್ವ ಕುಸ್ತಿಪಟು ಬಜರಂಗ್ ಪೂನಿಯಾ 65 ಕೆಜಿ ವಿಭಾಗದಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ.

ಕುಸ್ತಿಯ ಅಂತರ್‌ರಾಷ್ಟ್ರೀಯ ಒಕ್ಕೂಟ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್(ಯುಡಬ್ಲುಡಬ್ಲು) ಶುಕ್ರವಾರ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.

ಹಿರಿಯರ ವಿಭಾಗದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ದೀಪಕ್ ಮೊಣಕಾಲು ಗಾಯದಿಂದಾಗಿ ಇರಾನ್ ದಿಗ್ಗಜ ಹಸನ್ ಯಝ್ದಿನಿ ವಿರುದ್ಧ ಫೈನಲ್ ಪಂದ್ಯದಿಂದ ಹಿಂದೆ ಸರಿದು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು.

20ರ ಹರೆಯದ ದೀಪಕ್ ಇದೀಗ 82 ಅಂಕ ಗಳಿಸಿದ್ದು, ವಿಶ್ವ ಚಾಂಪಿಯನ್ ಹಸನ್‌ಗಿಂತ ನಾಲ್ಕು ಅಂಕ ಮುಂದಿದ್ದಾರೆ.

ದೀಪಕ್ ಈ ವರ್ಷ ಯಾಸರ್ ಡೊಗು ಟೂರ್ನಿಯಲ್ಲಿ ಬೆಳ್ಳಿ ಪದಕ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದೀಗ ತನ್ನ ಸ್ಥಿರ ಪ್ರದರ್ಶನಕ್ಕೆ ಗೌರವ ಪಡೆದಿದ್ದಾರೆ.

 ಬಜರಂಗ್ ವಿಶ್ವದ ನಂ.1 ಕುಸ್ತಿಪಟು ಆಗಿ ವಿಶ್ವ ಚಾಂಪಿಯನ್‌ಶಿಪ್‌ಗೆ ಪ್ರವೇಶಿಸಿದ್ದರು. ಚಾಂಪಿಯನ್‌ಶಿಪ್‌ನಲ್ಲಿ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದ ಅವರು 2ನೇ ಸ್ಥಾನಕ್ಕೆ ಜಾರಿದ್ದಾರೆ. 25ರ ಹರೆಯದ ಬಜರಂಗ್ 63 ಅಂಕ ಗಳಿಸಿದ್ದು, ಕಝಖ್‌ಸ್ತಾನದಲ್ಲಿ ಚಿನ್ನ ಜಯಿಸಿದ್ದ ರಶ್ಯದ ಗಡ್ಝಿಮುರಾಡ್ ರಶಿಡೊವ್ 65 ಕೆಜಿ ವಿಭಾಗದಲ್ಲಿ ನೂತನ ನಂ.1 ಕುಸ್ತಿಪಟು ಆಗಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿರುವ ರವಿ ದಹಿಯಾ 57 ಕೆಜಿ ವಿಭಾಗದಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ. 39 ಅಂಕ ಗಳಿಸಿರುವ ರವಿ 5ನೇ ಸ್ಥಾನದಲ್ಲಿದ್ದಾರೆ. ಕಂಚು ಜಯಿಸಿರುವ ರಾಹುಲ್ ಅವಾರೆ ವಿಶ್ವದ ನಂ.2ನೇ ಕುಸ್ತಿಪಟು ಆಗಿದ್ದಾರೆ.

 ಇದೇ ವೇಳೆ ಮಹಿಳೆಯರ ರ್ಯಾಂಕಿಂಗ್‌ನಲ್ಲಿ ವಿನೇಶ್ ಫೋಗಟ್ 53 ಕೆಜಿ ತೂಕ ವಿಭಾಗದಲ್ಲಿ ಎರಡನೇ ಸ್ಥಾನಕ್ಕೇರಿದರು. ಕಝಖ್‌ಸ್ತಾನದ ನೂರ್‌ಸುಲ್ತಾನ್‌ನಲ್ಲಿ ಫೋಗಟ್ ಕಂಚಿನ ಪದಕ ಜಯಿಸುವ ಜೊತೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಕಳೆದ ವಾರ ನೀಡಿದ್ದ ಉತ್ತಮ ಪ್ರದರ್ಶನ ನೆರವಿನಿಂದ ನಾಲ್ಕು ಸ್ಥಾನ ಭಡ್ತಿ ಪಡೆದಿದ್ದಾರೆ.

50 ಕೆಜಿ ತೂಕ ವಿಭಾಗದಲ್ಲಿ ಸೀಮಾ ಬಿಸ್ಲಾ 3ನೇ ಸ್ಥಾನಕ್ಕೆ ಜಾರಿದ್ದಾರೆ. ಪೂಜಾ ಧಾಂಡ 59 ಕೆಜಿ ವಿಭಾಗದಲ್ಲಿ 5ನೇ ಸ್ಥಾನ, ಮಂಜು ಕುಮಾರಿ 3ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News