×
Ad

ಪದಕ ಗೆಲ್ಲದೇ ಇದ್ದರೂ ಕ್ರೀಡಾಭಿಮಾನಿಗಳ ಮನ ಗೆದ್ದ ಅಥ್ಲೀಟ್

Update: 2019-09-28 16:47 IST

ದೋಹಾ: ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಶುಕ್ರವಾರ  5,000 ಮೀಟರ್ ಓಟದ ಸ್ಪರ್ಧೆಯಲ್ಲಿ ಕ್ರೀಡಾಭಿಮಾನಿಗಳು ಮನಕಲಕುವ ಘಟನೆಯೊಂದಕ್ಕೆ ಸಾಕ್ಷಿಯಾದರು.

ಗಿನಿ-ಬಿಸ್ಸಾವೊ ಇಲ್ಲಿನ 26 ವರ್ಷದ ಅಥ್ಲೀಟ್ ಬ್ರೈಮಾ ಸುಂಕರ್ ದಾಬೊ ಶುಕ್ರವಾರದ ಸ್ಪರ್ಧೆಯಲ್ಲಿ ಯಾವುದೇ ಪದಕ ಗೆಲ್ಲದೇ ಇದ್ದರೂ  ಕ್ರೀಡಾಭಿಮಾನಿಗಳ ಮನಸ್ಸುಗಳನ್ನು ತಮ್ಮ ಮಾನವೀಯ ಕಾರ್ಯದ ಮೂಲಕ ಗೆದ್ದೇ ಬಿಟ್ಟರು.

ಓಟದ ಕೊನೆಯ ಹಂತದಲ್ಲಿ ಎದುರಾಳಿ ಜೊನಾಥನ್ ಬುಸ್ಬಿ ಅವರು ಅನಾರೋಗ್ಯಕ್ಕೀಡಾಗಿದ್ದಾರೆ  ಹಾಗೂ ಇನ್ನೇನು ಅವರು ಕುಸಿದು ಬೀಳಬಹುದು ಎಂದು ಅರಿತು ತಕ್ಷಣ ಅವರತ್ತ ಧಾವಿಸಿ ಅವರನ್ನು ಗಟ್ಟಿಯಾಗಿ ಹಿಡಿದು  ತಮ್ಮ ಜತೆ ಅವರನ್ನೂ ಫಿನಿಶಿಂಗ್ ಲೈನ್  ತಲುಪುವಂತೆ ಮಾಡಿದರು.

ಅಂದ ಹಾಗೆ ಇಬ್ಬರೂ ಪ್ರಥಮ ಸ್ಥಾನ ಪಡೆದ ಇಥಿಯೋಪಿಯಾದ ಸೆಲೆಮೊನ್ ಬರೇಗಾ ಅವರಿಗಿಂತ ಸುಮಾರು 5 ನಿಮಿಷ ಹಿಂದಿದ್ದರು ಹಾಗೂ ಕೇವಲ ಕ್ರೀಡಾ ಸ್ಫೂರ್ತಿಯಿಂದ ಓಟ ಪೂರೈಸಲು ಮುಂದಕ್ಕೆ ಓಡುತ್ತಿದ್ದಾಗ ಈ ಘಟನೆ ನಡೆದಿದೆ. ಸುಮಾರು 200 ಮೀಟರ್ ತನಕ ಬ್ರೈಮಾ ಅವರು ಬುಸ್ಬಿ (33) ಅವರನ್ನು ಗಟ್ಟಿಯಾಗಿಯೇ ಹಿಡಿದು ಸಾಗಿದ್ದರು. ಫಿನಿಶಿಂಗ್ ಲೈನ್ ತಲುಪುತ್ತಿದ್ದಂತೆಯೇ ಕುಸಿದು ಬಿದ್ದ ಬುಸ್ಬಿ ಅವರನ್ನು ಅಲ್ಲಿಂದ  ಗಾಲಿ ಕುರ್ಚಿಯಲ್ಲಿ  ಕರೆದುಕೊಂಡು ಹೋಗಲಾಯಿತು.

"ಆತನಿಗೆ ರೇಸ್ ಪೂರ್ತಿಗೊಳಿಸಲು ಸಹಾಯ ಮಾಡುವುದಷ್ಟೇ  ನನ್ನ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಬೇರೆ ಯಾರೇ ಆಗಿದ್ದರೂ ಹೀಗೆಯೇ ಮಾಡುತ್ತಿದ್ದರು.'' ಎಂದು ಪೋರ್ಚುಗಲ್ ನಲ್ಲಿ ವಿದ್ಯಾರ್ಥಿಯಾಗಿರುವ ಡಾಬೊ ಹೇಳಿದ್ದಾರೆ.

ಡಾಬೊ ಈ ಸ್ಪರ್ಧೆಯನ್ನು 18 ನಿಮಿಷ 10.87 ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿದ್ದು ಇದು ಅವರ ಅತ್ಯುತ್ತಮ ಸಾಧನೆಯಾಗಿದೆ. ಆದರೆ ಬುಸ್ಬಿ ಅವರನ್ನು  ಅನರ್ಹಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News