ವಯಸ್ಸಿನ ಸುಳ್ಳು ದಾಖಲೆ ಸಲ್ಲಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸುವುದರಿಂದ ಕ್ರಿಕೆಟ್‌ಗೆ ಹಾನಿ *

Update: 2019-09-28 17:32 GMT

ಮುಂಬೈ, ಸೆ.28: ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ಸಲ್ಲಿಸಿ 19ರ ಕೆಳಹರೆಯದ ವರ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸುವ ವಿದ್ಯಮಾನ ಭಾರತದ ಕ್ರಿಕೆಟ್‌ಗೆ ಹಾನಿ ಎಸಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

          ಈ ಹಿನ್ನೆಲೆಯಲ್ಲಿ, ಓರ್ವ ಆಟಗಾರ ಬದುಕಿನಲ್ಲಿ ಒಮ್ಮೆ ಮಾತ್ರ 19ರ ಕೆಳಹರೆಯದ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಮಾಡಿಕೊಡುವ ಕಠಿಣ ನಿಯಮವನ್ನು ಜಾರಿಗೊಳಿಸಬೇಕು ಎಂದವರು ಒತ್ತಾಯಿಸಿದರು. ಕ್ರೀಡಾಂಗಣದ ಅಧಿಕಾರಿಗಳು, ತಂಡದ ಮಾಲಕರು, ಕ್ಲಬ್ ತಂಡಗಳು ಆಟಗಾರರು ವಯಸ್ಸಿನ ಬಗ್ಗೆ ಸುಳ್ಳು ಹೇಳುವುದನ್ನು ತಡೆಯಬಹುದು. ವಯಸ್ಸಿನ ಬಗ್ಗೆ ಸುಳ್ಳು ಹೇಳುವುದು ಕ್ರಿಕೆಟ್ ಆಟದ ಸಂಸ್ಕೃತಿಗೆ ಮಾರಕವಾಗಿದೆ ಎಂದು ದ್ರಾವಿಡ್ ಹೇಳಿದರು. ಭಾರತದ 19ರ ಕೆಳಹರೆಯದ ಕ್ರಿಕೆಟ್ ತಂಡದ ಮಾಜಿ ಕೋಚ್ ಆಗಿರುವ ದ್ರಾವಿಡ್, ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ನಿರ್ದೇಶಕರಾಗಿದ್ದಾರೆ. ಮುಂಬೈಯ ಬಿಕೆಸಿ ಎಂಸಿಎ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೈಮ್ಸ್ ಕ್ರಿಕೆಟ್ ಶೀಲ್ಡ್ ಟೂರ್ನಿಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಟೈಮ್ಸ್ ಕ್ರಿಕೆಟ್ ಶೀಲ್ಡ್ ನಲ್ಲಿ ಭಾಗವಹಿಸಲು ಆಗಲಿಲ್ಲವಲ್ಲ ಎಂಬ ಕೊರಗು ಮುಂಬೈಯಿಂದ ಹೊರಗಿರುವ ಆಟಗಾರರಿಗೆ ಸದಾ ಕಾಡುತ್ತಿರುತ್ತದೆ. ಇದಕ್ಕೆ ತಾನೂ ಹೊರತಾಗಿಲ್ಲ . ಈ ಟೂರ್ನಿಯಲ್ಲಿ ಆಡಿದ್ದ ಕರ್ನಾಟಕದ ಮಹೋನ್ನತ ಕ್ರಿಕೆಟ್ ಆಟಗಾರ ಬೃಜೇಶ್ ಪಟೇಲ್ ಮುಂಬೈಯ ಕ್ರಿಕೆಟ್ ಟೂರ್ನಿಯಲ್ಲಿ ಆಡಿ ಕ್ರಿಕೆಟ್ ಬದುಕು ಸಂಪೂರ್ಣಗೊಳಿಸುವಂತೆ ತನಗೆ ಸಲಹೆ ನೀಡಿದ್ದರು ಎಂದು ದ್ರಾವಿಡ್ ಹೇಳಿದರು. ಕ್ರಿಕೆಟ್ ಆಟಗಾರನಿಗೆ ಪ್ರತಿಭೆ, ದೃಢಸಂಕಲ್ಪದ ಜೊತೆಗೆ ನಿಯತ್ತು, ನಿಷ್ಠೆಯೂ ಅತ್ಯಗತ್ಯ. ತಂಡದಲ್ಲಿ ಸ್ಥಾನ ಕಲ್ಪಿಸಿದ ಸಂಸ್ಥೆಗಳಿಗೆ ನಿಷ್ಠೆ ಪ್ರದರ್ಶಿಸಿ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಯುವ ಆಟಗಾರರಿಗೆ ಕಿವಿ ಮಾತು ಹೇಳಿದರು. ನಿಮ್ಮಲ್ಲಿ ಪ್ರತಿಯೊಬ್ಬರೂ ರಣಜಿ ಕ್ರಿಕೆಟ್ ಅಥವಾ ಭಾರತ ತಂಡ ಅಥವಾ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯುತ್ತೀರಿ ಎನ್ನಲಾಗದು. ಆದರೆ ಕ್ರಿಕೆಟ್ ಅನ್ನು ಆನಂದಿಸಿದರೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಆಯ್ಕೆಯಾಗುತ್ತೇನೋ ಇಲ್ಲವೇ ಎಂಬ ಬಗ್ಗೆಯೇ ಚಿಂತಿಸಿದರೆ ನಿಮಗೆ ಆಟವನ್ನು ಆನಂದಿಸಲು ಸಾಧ್ಯವಾಗದು ಎಂದು ದ್ರಾವಿಡ್ ಹೇಳಿದರು. ಟೈಮ್ಸ್ ಶೀಲ್ಡ್ ಎ ಡಿವಿಷನ್ ಟೂರ್ನಿಯಲ್ಲಿ ಡಿವೈ ಪಾಟೀಲ್ ಗ್ರೂಪ್ ‘ಎ’ ತಂಡ ಪ್ರಶಸ್ತಿ ಗಳಿಸಿದೆ. ಬಿಸಿಸಿಐಯ ಮಾಜಿ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಪ್ರೊ ರತ್ನಾಕರ ಶೆಟ್ಟಿ, ಎಂಸಿಎ ಜಂಟಿ ಕಾರ್ಯದರ್ಶಿ ಉಮೇಶ್ ಖಾನ್ವಿಳ್ಕರ್, ಎಂಸಿಎ ಸಿಇಒ ಸಿಎಸ್ ನಾಕ್, ಟೈಮ್ಸ್ ಕ್ರಿಕೆಟ್ ಶೀಲ್ಡ್‌ನ ಅಧ್ಯಕ್ಷ ರೋಹಿತ್ ಗೋಪಕುಮಾರ್, ಗೌರವ ಕಾರ್ಯದರ್ಶಿ ಆರ್ ವೆಂಕಟಕೇಶವನ್ ಮತ್ತಿತರರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News