×
Ad

ನಿವೃತ್ತಿಯ ಬಗ್ಗೆ ಧೋನಿ ಸ್ವಯಂ ನಿರ್ಧರಿಸುತ್ತಾರೆ : ಶಿಖರ್ ಧವನ್

Update: 2019-09-28 23:04 IST

ಹೊಸದಿಲ್ಲಿ, ಸೆ.28: ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಮೀರಿಸುವವರಿಲ್ಲ. ಅಂತೆಯೇ ತಮ್ಮ ಅದ್ಭುತ ಅಂತರ್‌ರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಬಗ್ಗೆಯೂ ಅವರೇ ನಿರ್ಧರಿಸುತ್ತಾರೆ ಎಂದು ಹಿರಿಯ ಕ್ರಿಕೆಟಿಗ ಶಿಖರ್ ಧವನ್ ಹೇಳಿದ್ದಾರೆ. ಧೋನಿ ಸುದೀರ್ಘಾವಧಿಯಿಂದ ಆಡುತ್ತಿದ್ದಾರೆ. ತಾನು ಯಾವಾಗ ನಿವೃತ್ತಿಯಾಗಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅದು ಅವರದೇ ನಿರ್ಧಾರವಾಗಿರಬೇಕು. ತನ್ನ ವೃತ್ತಿಜೀವನದಲ್ಲಿ ಭಾರತದ ಪರವಾಗಿ ಹಲವು ಪ್ರಮುಖ ನಿರ್ಧಾರಗಳನ್ನು ಅವರು ಕೈಗೊಂಡಿದ್ದಾರೆ. ಅಂತೆಯೇ ಸಮಯ ಬಂದಾಗ ಅವರೇ ನಿವೃತ್ತಿ ಘೋಷಿಸುತ್ತಾರೆ ಎಂದು ಧವನ್ ಹೇಳಿದರು. ರಜತ್ ಶರ್ಮ ನಿರೂಪಕರಾಗಿರುವ ಇಂಡಿಯಾ ಟಿವಿಯ ಕಾರ್ಯಕ್ರಮ ‘ಆಪ್ ಕಿ ಅದಾಲತ್’ನಲ್ಲಿ ಧವನ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಪ್ರತಿಯೊಬ್ಬ ಆಟಗಾರ ತನ್ನ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸುವಂತೆ ಹುರಿದುಂಬಿಸುವಲ್ಲಿ ಧೋನಿಗೆ ಬೇರೆ ಯಾರೂ ಸಮಾನರಿಲ್ಲ. ಉತ್ತಮ ನಾಯಕನ ಲಕ್ಷಣವಿದು. ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯವನ್ನೂ ಅವರು ಬಲ್ಲರು. ಯಾವ ಆಟಗಾರನಿಗೆ ಎಲ್ಲಿಯವರೆಗೆ ಬೆಂಬಲಿಸಬೇಕು, ಆಟಗಾರನನ್ನು ಚಾಂಪಿಯನ್ ಆಗಿಸುವುದು ಹೇಗೆ ಎಂಬುದು ಅವರಿಗೆ ತಿಳಿದಿದೆ. ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ದೊರೆತ ಯಶಸ್ಸು ಇದನ್ನು ಸಮರ್ಥಿಸುತ್ತದೆ. ಅವರಿಗಿದ್ದ ನಿಯಂತ್ರಣ ಶಕ್ತಿ ಅವರ ಬಹುದೊಡ್ಡ ವೈಶಿಷ್ಟವಾಗಿದೆ. ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರಿಗೂ ಧೋನಿ ಬಗ್ಗೆ ಅಪಾರ ಗೌರವವಿದೆ. ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ ಆರಂಭದ ದಿನಗಳಲ್ಲಿ ಧೋನಿ ಯಿಂದ ಸಲಹೆ, ಸೂಚನೆ , ಮಾರ್ಗದರ್ಶನ ಪಡೆಯುತ್ತಿದ್ದರು. ಯಾವಾಗಲೂ ತನಗೆ ಧೋನಿಭಾಯ್ ಸಹಾಯ ಮಾಡುತ್ತಿದ್ದರು ಎಂದು ಈಗಲೂ ವಿರಾಟ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಇದು ಮಹಾನ್ ನಾಯಕನ ಗುಣಲಕ್ಷಣ ಎಂದು ಧವನ್ ಹೇಳಿದರು. ಧೋನಿಯ ನಾಯಕತ್ವದ ಅವಧಿಯಲ್ಲಿ ಶಿಖರ್ ಧವನ್ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ತನ್ನ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭಿಸಿದ್ದರು. ಧೋನಿಯ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಕಾರ್ಯ ನಿರ್ವಹಿಸುತ್ತಿರುವ ರಿಷಬ್ ಪಂತ್ ಅವರ ಕಳಪೆ ಫಾರ್ಮ್ ಕುರಿತ ಪ್ರಶ್ನೆಗೆ ಉತ್ತರಿಸಿದ ಧವನ್, ಅವರೊಬ್ಬ ಪ್ರತಿಭಾನ್ವಿತ ಆಟಗಾರ. ಭಾರತ ತಂಡದಲ್ಲಿ ಅವರು ಸುದೀರ್ಘಾವಧಿ ಆಡಲಿದ್ದಾರೆ ಎಂಬ ವಿಶ್ವಾಸವಿದೆ. ಕೆಲವು ಸಂದರ್ಭಗಳಲ್ಲಿ ನಿಮಗೆ ರನ್ ಗಳಿಸಲು ಸಾಧ್ಯವಾಗದಿರಬಹುದು. ಆದರೆ ಇದರಿಂದ ನೀವು ಕಲಿಯಬೇಕು. ವೈಫಲ್ಯವನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಸಾಧ್ಯ. ಕಳಪೆ ಫಾರ್ಮ್ ಎಂಬುದು ಎಲ್ಲಾ ಕ್ರಿಕೆಟಿಗರ ಜೀವನದಲ್ಲೂ ಸಂಭವಿಸುವ ಘಟನೆ. ರಿಷಬ್ ಪಂತ್ ಕೂಡಾ ವೈಫಲ್ಯದಿಂದ ಪಾಠ ಕಲಿತು ಯಶಸ್ಸಿನತ್ತ ಸಾಗುತ್ತಾರೆ ಎಂಬ ವಿಶ್ವಾಸವಿದೆ. ಅವರೊಬ್ಬ ಉತ್ತಮ ಆಟಗಾರ. ಉತ್ತಮ ಆಟಗಾರರನ್ನು ಬೆಂಬಲಿಸಬೇಕು. ನನ್ನ ಕ್ರಿಕೆಟ್ ಜೀವನದಲ್ಲೂ ಏರಿಳಿತ ಸಂಭವಿಸಿದೆ. ಆದರೂ ವೈಫಲ್ಯ ಎಂಬ ಸವಾಲು ಎದುರಿಸಿ ಇನ್ನೂ ತಂಡದಲ್ಲಿ ಮುಂದುವರಿದಿದ್ದೇನೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News