ಧರುಣ್ ಅಯ್ಯಸಾಮಿ ವಿಫಲ; ಜಬೀರ್ ಸೆಮಿಫೈನಲ್‌ಗೆ
ದೋಹಾ, ಸೆ.28: ದೋಹಾದಲ್ಲಿ ಶುಕ್ರವಾರ ಆರಂಭಗೊಂಡ ಐಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 400 ಮೀ. ಹರ್ಡಲ್ಸ್ ನಲ್ಲಿ ತಮಿಳುನಾಡಿನ ಭರವಸೆಯ ಓಟಗಾರ ಧರುಣ್ ಅಯ್ಯ್‌ಸಾಮಿ ಮೊದಲ ಸುತ್ತಿನಲ್ಲಿಯೇ ವಿಫಲರಾಗಿ ನಿರ್ಗಮಿಸಿದ್ದಾರೆ. ಆದರೆ ಭಾರತದ ಮತ್ತೊಬ್ಬ ಭರವಸೆಯ ಓಟಗಾರ ಎಂಪಿ ಜಬೀರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ದೀರ್ಘಾವಧಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಕಣಕ್ಕಿಳಿದಿದ್ದ ಧರುಣ್ 50.55 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ತಮ್ಮ ವಿಭಾಗದಲ್ಲಿ ಆರನೇ ಸ್ಥಾನ ಮತ್ತು ಒಟ್ಟು 39 ಸ್ಪರ್ಧಿಗಳಲ್ಲಿ 27ನೇ ಸ್ಥಾನ ಗಳಿಸಿ ಸ್ಪರ್ಧೆಯಿಂದ ನಿರ್ಗಮಿಸಿದರು. ಈ ವರ್ಷದ ಮಾರ್ಚ್ ನಲ್ಲಿ ಪಟಿಯಾಲಾದಲ್ಲಿ ನಡೆದಿದ್ದ ಫೆಡರೇಶನ್ ಕಪ್ ಅಥ್ಲೆಟಿಕ್ಸ್‌ನಲ್ಲಿ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ 48.80 ಸೆಕೆಂಡ್ಸ್‌ನಲ್ಲಿ ಗುರಿಮುಟ್ಟಿದ್ದ ಧರುಣ್ ಚಿನ್ನದ ಪದಕ ಗೆದ್ದಿದ್ದರು. ಇದು ನೂತನ ರಾಷ್ಟ್ರೀಯ ದಾಖಲೆಯಾಗಿದೆ. ಬಳಿಕ ಮೊಣಕಾಲ ಮೂಳೆ ಮುರಿತಕ್ಕೊಳಗಾದ ಕಾರಣ ಎಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಏಶಿಯನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದರು. ಭಾರತದ ಮತ್ತೊಬ್ಬ ಭರವಸೆಯ ಸ್ಪರ್ಧಿ ಎಂಪಿ ಜಬೀರ್ 49.62 ಸೆಕೆಂಡ್ಸ್ ನಲ್ಲಿ ಗುರಿತಲುಪಿ, ತಮ್ಮ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದ್ದಾರೆ.