ಸಮಸ್ಯೆಗಳನ್ನು ಚರ್ಚಿಸದ ಶಾಸಕರು ವಿಧಾನಸೌಧದಲ್ಲಿರಲು ಯೋಗ್ಯರಲ್ಲ: ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ

Update: 2019-09-29 17:33 GMT

ಬೆಂಗಳೂರು, ಸೆ.29: ಶಾಸಕರಾಗಿ ಆಯ್ಕೆಯಾದ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡಬೇಕು. ಇಲ್ಲದಿದ್ದರೆ, ಅಂತಹ ಶಾಸಕರು ಅಲ್ಲಿರಲು ಯೋಗ್ಯರಲ್ಲ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ರವಿವಾರ ನಗರದಲ್ಲಿ ದಕ್ಷಿಣ ಕನ್ನಡಿಗರ ಸಂಘದ ವಜ್ರಮಹೋತ್ಸವ ಹಾಗೂ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮತದಾರರು ನಮ್ಮ ಸಮಸ್ಯೆಗಳ ಬಗ್ಗೆ ಶಕ್ತಿ ಸೌಧದಲ್ಲಿ ಧ್ವನಿ ಎತ್ತಲಿ ಎಂಬ ಉದ್ದೇಶದಿಂದ ಶಾಸಕರನ್ನು ಆಯ್ಕೆ ಮಾಡಿ ಕಳಿಸುತ್ತಾರೆ. ಹೀಗಾಗಿ, ಶಾಸಕರು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.

ನಮ್ಮಲ್ಲಿ ಇಂದಿನ ರಾಜಕಾರಣ ಸಂಪೂರ್ಣ ಬದಲಾಗಿದೆ. ನಮ್ಮ ಕಾಲದಲ್ಲಿ ಶಾಸಕರಾಗಿ ಆಯ್ಕೆಯಾಗುವುದು ಶ್ರೇಷ್ಟವಾದುದಾಗಿತ್ತು. ಆದರೆ, ಇಂದು ಸ್ಥಾನ ಗಳಿಸುವುದೇ ರಾಜಕಾರಣವಾಗಿದೆ ಎಂದ ಅವರು, ಜನರಿಂದ ಆಯ್ಕೆಯಾದ ಬಳಿಕ ಆಕಸ್ಮಿಕವಾಗಿ ಮಂತ್ರಿಯಾಗುತ್ತೇವೆ. ಅದಕ್ಕೆಂದೇ ನಮ್ಮ ಸ್ಥಾನ ಮೀಸಲಿಡಬಾರದು ಎಂದು ನುಡಿದರು. ರಾಜಕಾರಣಿಗಳಾಗಿ ಎಷ್ಟು ದಿನ ಅಧಿಕಾರದಲ್ಲಿ ಇದ್ದೆವು ಎಂಬುದು ಮುಖ್ಯವಲ್ಲ. ಅಧಿಕಾರದಲ್ಲಿದ್ದ ವೇಳೆ ಎಷ್ಟು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಅಧಿಕಾರದಿಂದ ಕೆಳಗಿಳಿದ ಬಳಿಕ ಇವರು ಏನೂ ಮಾಡಲಿಲ್ಲ ಎನ್ನಬಾರದು ಎಂದ ಅವರು, ನಾನು ಅಧಿಕಾರದಿಂದ ಕೆಳಗಿಳಿದರೂ ಇಂದಿಗೂ ಜನರ ಸೇವೆ ಮಾಡುತ್ತಿರುವೆ ಎಂದು ಹೇಳಿದರು.

ಚುನಾವಣೆಯಲ್ಲಿ ಸೋತರು ನಾನು ಇಂದಿಗೂ ಚಲಾವಣೆಯಲ್ಲಿದ್ದೇನೆ. ಅದಕ್ಕಾಗಿ ಜನ ಇಂದಿಗೂ ನನ್ನಲ್ಲಿಗೆ ಕೆಲಸ ಮಾಡಿಕೊಡಿ ಎಂದು ಬರುತ್ತಾರೆ. ನೀವು ಸಚಿವರು, ಸಂಸದರ ಬಳಿಗೆ ಯಾಕೆ ಹೋಗುವುದಿಲ್ಲ ಎಂದರೆ, ನಿಮಗೆ ಚೆನ್ನಾಗಿ ಕೆಲಸ ಮಾಡುವುದು ತಿಳಿದಿದೆ ಎನ್ನುತ್ತಾರೆ ಎಂದು ತಿಳಿಸಿದರು.

ಜನಪ್ರತಿನಿಧಿಗಳ ತಪ್ಪನ್ನು ಜನರು ಗುರುತಿಸಿದರೆ ಅವರು ತಪ್ಪನ್ನು ಮಾಡುವುದನ್ನು ನಿಲ್ಲಿಸುತ್ತಾರೆ. ಆಗ ರಾಜಕಾರಣಿಗಳು ಸುಧಾರಿಸಿಕೊಳ್ಳುತ್ತಾರೆ. ಅಲ್ಲದೆ, ಚುನಾವಣೆಗಳ ಸಂದರ್ಭದಲ್ಲಿ ಮತದಾರರು ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಮತದಾರರು ಈ ಬಗ್ಗೆ ಆಲೋಚನೆ ಮಾಡಬೇಕು ಎಂದರು.

ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ವೇಳೆ ಕೆಟ್ಟವರನ್ನು ಸೋಲಿಸಿದರೆ ಆಕಸ್ಮಿಕವಾಗಿ ಪಕ್ಷಗಳೇ ಮುಂದಿನ ಬಾರಿ ಒಳ್ಳೆಯವರಿಗೆ ಅವಕಾಶ ನೀಡುತ್ತವೆ. ಒಳ್ಳೆಯವರಿಲ್ಲದಿದ್ದರೆ ಐದು ವರ್ಷಗಳ ಕಾಲ ಅವರನ್ನು ತಡೆಯಲು ಯಾರಿಂದಲೂ ಅಸಾಧ್ಯ. ಆಯ್ಕೆ ಮಾಡುವ ಮೊದಲೇ ಯೋಚಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ ಇಂದು ಭೀಕರವಾದ ನೀರಿನ ಸಮಸ್ಯೆ ತಲೆದೋರಿದೆ. ಜನರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ಸರಕಾರಗಳು ನೀರನ್ನು ಉಳಿಸುವ ಕಡೆಗೆ ಯೋಜನೆಗಳನ್ನು ರೂಪಿಸಬೇಕು. ಕೆರೆ, ಕುಂಟೆ, ಕಾಲುವೆಗಳನ್ನು ಪುನಶ್ಚೇತನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ತುಳು 8ನೆ ಅನುಚ್ಚೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಮೊಟ್ಟ ಮೊದಲ ಬಾರಿಗೆ ದಿಲ್ಲಿ ಮಟ್ಟದಲ್ಲಿ ಸಭೆ ನಡೆಸಿ, ನಿರ್ಣಯ ಕೈಗೊಂಡಿದ್ದೆವು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲಿಯೇ ಅಲ್ಲದೆ, ದೇಶ-ವಿದೇಶದಲ್ಲಿಯೂ ಇದಕ್ಕೆ ಒತ್ತಡ ಬರುತ್ತಿರುವುದು ಮತ್ತೊಂದು ಬೆಳವಣಿಗೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಭೂಷಣ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News