ಅಮಾಯಕರಿಗೆ ಶಿಕ್ಷೆ ನೀಡಲು ಒತ್ತಡ: ಐವರನ್ನು ಖುಲಾಸೆಗೊಳಿಸಿ ತನಗೆ ತಾನೇ ಗುಂಡಿಕ್ಕಿಕೊಂಡ ನ್ಯಾಯಾಧೀಶ

Update: 2019-10-05 18:48 GMT

ಬ್ಯಾಂಕಾಕ್, ಅ. 5: ಕೊಲೆ ಹಾಗೂ ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಅಮಾಯಕರನ್ನು ಅಪರಾಧಿಗಳೆಂದು ಘೋಷಿಸಲು ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ನ್ಯಾಯಾದೀಶರೊಬ್ಬರು ನ್ಯಾಯಾಲಯದಲ್ಲೇ ಗುಂಡು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಥಾಯ್ಲೆಂಡ್‌ ನಲ್ಲಿ ನಡೆದಿದೆ.

ಥಾಯ್ಲೆಂಡ್‌ನ ಯಾಲ ಎಂಬ ನಗರದಲ್ಲಿನ ಪ್ರಾದೇಶಿಕ ನ್ಯಾಯಾಲಯದ ನ್ಯಾಯಾಧೀಶ ಕಾನಾಕಾರ್ನ್ ಪಿಯಾಂಚನ ಅವರು ಪ್ರಕರಣವೊಂದರಲ್ಲಿ ಐದು ಮಂದಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ ಬೆನ್ನಿಗೇ ತನಗೆ ತಾನೇ ಗುಂಡಿಕ್ಕಿಕೊಂಡಿದ್ದಾರೆ.

ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಯತ್ನಿಸುವ ಮುನ್ನ ನೀಡಿದ ಹೇಳಿಕೆಯಲ್ಲಿ "ಖುಲಾಸೆಗೊಳಿಸಿದ ಐದು ಮಂದಿಯನ್ನು ಅಮಾಯಕರೆಂದು ತೀರ್ಪು ನೀಡಿ ಆ ಪೈಕಿ ಮೂವರಿಗೆ ಮರಣದಂಡನೆ ಹಾಗೂ ಉಳಿದಿಬ್ಬರಿಗೆ ಜೈಲು ಶಿಕ್ಷೆ ನೀಡಲು ಹಿರಿಯ ನ್ಯಾಯಾಧೀಶರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾನು ತೆಗೆದುಕೊಂಡ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ನಾನು ಸಾಯಲು ಭಯಸುತ್ತೇನೆ" ಎಂದು ನ್ಯಾಯಾಧೀಶರು ಹೇಳಿದ್ದಾರೆಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಈ ಘಟನೆಯಂದ ಥಾಯ್ಲೆಂಡ್‌ನ ನ್ಯಾಯ ವ್ಯವಸ್ಥೆ ಬಗ್ಗೆ ಭಾರೀ ಕಳವಳ ವ್ಯಕ್ತವಾಗಿದ್ದು, ಅಲ್ಲಿನ ಹಿರಿಯ ನ್ಯಾಯಾಧೀಶರು ರಾಜಕೀಯ ಉದ್ದೇಶಗಳಿಗಾಗಿ ಅಮಾಯಕರಿಗೆ ಶಿಕ್ಷೆ ನೀಡುತ್ತಿದ್ದಾರೆ ಎಂಬ ಸಂಶಯಗಳು ಹರಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News