ಮೊದಲ ಬಾರಿ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಪಡೆದ ಭಾರತ

Update: 2019-10-07 12:00 GMT

ಹೊಸದಿಲ್ಲಿ, ಅ.7: ಉಭಯ ದೇಶಗಳ ನಡುವಿನ ಹೊಸ ಸ್ವಯಂಚಾಲಿತ ಮಾಹಿತಿ ವಿನಿಮಯದ ಅಡಿಯಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿನ ತನ್ನ ನಿವಾಸಿಗಳ ಹಣಕಾಸು ಖಾತೆಗಳ ಬಗ್ಗೆ ಭಾರತವು ಮೊದಲ ಬಾರಿಗೆ ವಿವರಗಳನ್ನು ಪಡೆದುಕೊಂಡಿದೆ, ಇದು ವಿದೇಶದಲ್ಲಿ ಕೂಡಿಡಲಾದ ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. 

ಎಇಒಐನಲ್ಲಿ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಟ್ಜರ್ಲೆಂಡ್‌ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಹಣಕಾಸು ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡ 75 ದೇಶಗಳಲ್ಲಿ ಭಾರತವು ಒಂದಾಗಿದೆ ಎಂದು ಎಫ್‌ಟಿಎ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಎಇಒಐ ಚೌಕಟ್ಟಿನಡಿಯಲ್ಲಿ ಭಾರತವು ಸ್ವಿಟ್ಜರ್ಲೆಂಡ್‌ನಿಂದ ವಿವರಗಳನ್ನು ಪಡೆದಿರುವುದು ಇದೇ ಮೊದಲು, ಇದು ಇದೀಗ ಸಕ್ರಿಯವಾಗಿರುವ ಹಣಕಾಸು ಖಾತೆಗಳ ಮಾಹಿತಿ ಮತ್ತು 2018 ರಲ್ಲಿ ಮುಚ್ಚಲ್ಪಟ್ಟ ಖಾತೆಗಳ ಮಾಹಿತಿಯನ್ನು ಒದಗಿಸುತ್ತದೆ. ಮುಂದಿನ ವಿನಿಮಯವು ಸೆಪ್ಟೆಂಬರ್ 2020 ರಲ್ಲಿ ನಡೆಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಆದಾಗ್ಯೂ, ವಿನಿಮಯವನ್ನು ಕಟ್ಟುನಿಟ್ಟಾದ ಗೌಪ್ಯತೆ ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು ಎಫ್‌ಟಿಎ ಅಧಿಕಾರಿಗಳು ಖಾತೆಗಳ ಸಂಖ್ಯೆಯ ಬಗ್ಗೆ ಅಥವಾ ಸ್ವಿಸ್ ಬ್ಯಾಂಕುಗಳ ಭಾರತೀಯ ಗ್ರಾಹಕರ ಖಾತೆಗಳಿಗೆ ಸಂಬಂಧಿಸಿದ ಹಣಕಾಸಿನ ಸೊತ್ತುಗಳ ಪ್ರಮಾಣದ ಬಗ್ಗೆ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News