ಮೂವರು ಸಂಶೋಧಕರಿಗೆ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ

Update: 2019-10-09 01:39 GMT

ಸ್ಟಾಕ್‌ಹೋಮ್ (ಸ್ವೀಡನ್), ಅ. 8: ಅಮೆರಿಕ ಮತ್ತು ಬ್ರಿಟನ್‌ನ ಮೂವರು ಸಂಶೋಧಕರಿಗೆ ಸೋಮವಾರ ಈ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಆಮ್ಲಜನಕದ ಲಭ್ಯತೆಯನ್ನು ಜೀವಕೋಶಗಳು ಹೇಗೆ ಗುರುತಿಸುತ್ತವೆ ಮತ್ತು ಅವುಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬ ಕುರಿತ ಸಂಶೋಧನೆಗಳಿಗೆ ಅವರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಲಾಗಿದೆ.

ಅವರ ಸಂಶೋಧನೆಗಳು ಹೊಸ ಕ್ಯಾನ್ಸರ್ ಚಿಕಿತ್ಸೆಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ನೊಬೆಲ್ ಅಸೆಂಬ್ಲಿ ಹೇಳಿದೆ.

ಅಮೆರಿಕದ ವಿಲಿಯಮ್ ಕೇಲಿನ್ ಮತ್ತು ಗ್ರೆಗ್ ಸೆಮನ್ಝ ಹಾಗೂ ಬ್ರಿಟನ್‌ನ ಪೀಟರ್ ರ್ಯಾಟ್‌ಕ್ಲಿಫ್ ಒಂಬತ್ತು ಮಿಲಿಯ ಸ್ವೀಡಿಶ್ ಕ್ರೋನರ್ (ಸುಮಾರು 6.50 ಕೋಟಿ ರೂಪಾಯಿ) ನಗದು ಹಣವನ್ನು ಹಂಚಿಕೊಳ್ಳಲಿದ್ದಾರೆ.

‘‘ಆಮ್ಲಜನಕ ಮಟ್ಟವು ಜೀವಕೋಶಗಳ ಚಯಾಪಚಯ ಕ್ರಿಯೆ (ಮೆಟಬಾಲಿಸಂ) ಮತ್ತು ಜೈವಿಕ ಕಾರ್ಯಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ವ್ಯವಸ್ಥೆಯೊಂದನ್ನು ಅವರು ರೂಪಿಸಿದ್ದಾರೆ’’ ಎಂದು ತೀರ್ಪುಗಾರರ ಮಂಡಳಿ ಹೇಳಿದೆ.

ಅವರ ಸಂಶೋಧನೆಯು ಅನೀಮಿಯ, ಕ್ಯಾನ್ಸರ್ ಮತ್ತು ಇತರ ಹಲವಾರು ರೋಗಗಳ ವಿರುದ್ಧ ಹೋರಾಡುವ ಭರವಸೆಯ ನೂತನ ವಿಧಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News