ಆದಿಲ್ ಖಾನ್ ಅಮೋಘ ಗೋಲು, ಭಾರತ-ಬಾಂಗ್ಲಾ ವಿಶ್ವಕಪ್ ಅರ್ಹತಾ ಪಂದ್ಯ 1-1 ಡ್ರಾ

Update: 2019-10-15 17:39 GMT

ಕೋಲ್ಕತಾ, ಅ.15: ಕೊನೆಯ ಕ್ಷಣದಲ್ಲಿ ಡಿಫೆಂಡರ್ ಆದಿಲ್ ಖಾನ್ ಗಳಿಸಿದ ಗೋಲು ನೆರವಿನಿಂದ ಆತಿಥೇಯ ಭಾರತ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 1-1 ರಿಂದ ರೋಚಕ ಡ್ರಾ ಸಾಧಿಸಿ ಸೋಲಿನಿಂದ ಪಾರಾಗಿದೆ.

ಸಾಲ್ಟ್‌ಲೇಕ್‌ನ ಯುವ ಭಾರತಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ 42ನೇ ನಿಮಿಷದಲ್ಲಿ ಹೆಡರ್‌ನ ಮೂಲಕ ಗೋಲು ಗಳಿಸಿದ ಸಾದುದ್ದೀನ್ ಬಾಂಗ್ಲಾಕ್ಕೆ 1-0 ಮುನ್ನಡೆ ಒದಗಿದರು. ನೆರದಿದ್ದ ಭಾರತದ ಪ್ರೇಕ್ಷಕರನ್ನು ದಂಗುಬಡಿಸಿದರು.

 89ನೇ ನಿಮಿಷದಲ್ಲಿ ಹೆಡರ್‌ನ ಮೂಲಕ ಅಮೋಘ ಗೋಲು ಗಳಿಸಿದ ಆದಿಲ್ ಖಾನ್ ಭಾರತ 1-1 ರಿಂದ ಸಮಬಲ ಸಾಧಿಸಲು ನೆರವಾದರು. 8 ವರ್ಷಗಳ ಬಳಿಕ ತಂಡಕ್ಕೆ ವಾಪಸಾಗಿರುವ ಖಾನ್ ಚೊಚ್ಚಲ ಗೋಲು ಗಳಿಸಿದರು. ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಈ ತನಕ ಜಯ ಸಾಧಿಸಲು ವಿಫಲವಾಗಿರುವ ಭಾರತ ಎರಡನೇ ಬಾರಿ ಡ್ರಾ ಸಾಧಿಸಿತು. 3 ಪಂದ್ಯಗಳಲ್ಲಿ ಎರಡು ಅಂಕ ಗಳಿಸಿ ‘ಇ’ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕತರ್ ಮೊದಲ ಸ್ಥಾನದಲ್ಲಿದೆ. ಒಮಾನ್,ಅಫ್ಘಾನಿಸ್ತಾನ, ಬಾಂಗ್ಲಾ ಬಳಿಕದ ಸ್ಥಾನದಲ್ಲಿವೆ.

ಕತರ್ ವಿರುದ್ಧ ಗೋಲುರಹಿತ ಡ್ರಾಗೊಳಿಸಿದ್ದ ಭಾರತ ತಂಡದಲ್ಲಿ 3 ಬದಲಾವಣೆ ಮಾಡಿದ್ದ ಭಾರತದ ಕೋಚ್ ಇಗೊರ್ ಸ್ಟಿಮಾಕ್ ಅವರು ನಿಖಿಲ್ ಪೂಜಾರಿ, ರೌಲಿನ್ ಬ್ರೊಗೆಸ್, ಸಂದೇಶ್ ಜಿಂಗಾನ್ ಬದಲಿಗೆ ಆಶೀಕ್, ಸುನೀಲ್ ಚೆಟ್ರಿ ಹಾಗೂ ಅನಸ್ ಎಡ್ತೊಡಿಕಾರನ್ನು ಕಣಕ್ಕಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News